ಚನ್ನಗಿರಿಯಿಂದ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಬಿಜೆಪಿ ಮಾಡಾಳ್ ವಿರೂಪಾಕ್ಷಪ್ಪ ಕುಟುಂಬದ ಬದಲಿಗೆ ಖ್ಯಾತ ವೈದ್ಯ ಡಾ ಧನಂಜಯ್ ಸರ್ಜಿ ಅವರಿಗೆ ಟಿಕೆಟ್ ನೀಡಬಹುದು ಎಂಬ ಬಗ್ಗೆ ದಾವಣಗೆರೆ ಜಿಲ್ಲಾ ಬಿಜೆಪಿ ಮತ್ತು ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ಚರ್ಚೆ ಜೋರಾಗಿದೆ.
ಈ ನಡುವೆ ಚನ್ನಗಿರಿಯಿಂದ ತಮಗೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಯೋಚಿಸ್ತಿದೆ ಎಂಬ ವರದಿಗಳ ಬಗ್ಗೆ ಡಾ ಧನಂಜಯ್ ಸರ್ಜಿ ಅವರು ಪ್ರತಿಕ್ರಿಯಿಸಿದ್ದಾರೆ.
ನಾನೊಬ್ಬ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಮೊದಲಿನಿಂದಲೂ ಬಿಜೆಪಿ ಸಂಘಟನೆಯಲ್ಲಿ ಬೆಳೆದು ಬಂದವನು. ಪಕ್ಷ ನಿಷ್ಠೆ ನನ್ನಲಿದೆ. ಶಿವಮೊಗ್ಗ ಜಿಲ್ಲೆ ಪ್ರಣಾಳಿಕೆ ಸಂಗ್ರಹ ಸಂಚಾಲಕನಾಗಿ ಪಕ್ಷ ನಿಯುಕ್ತಿಗೊಳಿಸಿದೆ.
ಬಿಜೆಪಿ ವಿಭಾಗೀಯ ಕಾರ್ಯದರ್ಶಿಗಳು ನನಗೆ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಚುನಾವಣಾ ಓಡಾಟ ಮಾಡುವಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಗ್ರಾಮಾಂತರ ಭಾಗದಲ್ಲಿ ಓಡಾಟ ಮುಂದುವರಿಸಿದ್ದೇನೆ.
ಹಿಂದೆಯೂ ಸಹ ಸಾಕಷ್ಟು ಸಲ ನಾನು ಚನ್ನಗಿರಿಯಿಂದ ಸ್ಪರ್ಧಿಸಬೇಕು ಎಂದು ಜನರು ಒತ್ತಾಯ ಮಾಡಿದ್ದರು. ಚನ್ನಗಿರಿಯಲ್ಲೇ ನಾನು ಹುಟ್ಟಿ ಬೆಳೆದಿದ್ದು, ಕುಟಂಬಗಳೂ ಅಲ್ಲೇ ಇವೆ, ತೋಟಗಳೂ ಇವೆ.
ನನ್ನ ಸ್ನೆಹಿತರು, ನೆಂಟರಿಷ್ಟರು, ಸಂಬಂಧಿಕರು ಸಹ ಹೆಚ್ಚಾಗಿ ಅಲ್ಲಿದ್ದಾರೆ. ಶೇ. 80 ರಷ್ಟು ನನ್ನ ಆಪ್ತರೇ ಅಲ್ಲಿದ್ದಾರೆ. ಅಲ್ಲಿನ ಜನ ಹಾಗೂ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದು ನಿಜ.!
ಮುನ್ನೂರಿಂದ ನಾಲ್ಕು ನೂರು ಫೋನ್ ಕರೆಗಳು ಬಂದಿರಬಹುದು. ತುಂಬಾ ಜನರು ಭೇಟಿಯಾಗಿದ್ದಾರೆ.
ನಾನು ಪರಿವಾರದ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಏನು ಸೂಚನೆ ಮಾಡುತ್ತೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಚನ್ನಗಿರಿಯಂತೆ ಭದ್ರಾವತಿಯಲ್ಲೂ ಸಹ ಇದೇ ತರಹ ಅಲ್ಲಿನ ಜನ ಸರ್ಜಿ ಚುನಾವಣೆಗೆ ನಿಲ್ಲಲಿ ಎಂದು ಹೇಳುತ್ತಿದ್ದರು.
ಆದರೆ ಎಲ್ಲದನ್ನೂ ಪಕ್ಷದ ಹಿರಿಯರಿಗೆ ಬಿಟ್ಟಿದ್ದೇನೆ. ಅವರ ನಿರ್ಧಾರದ ನಂತರ ನಾನು ಅಧಿಕೃತವಾಗಿ ಮಾತನಾಡುತ್ತೇನೆ
ಎಂದು ಧನಂಜಯ ಸರ್ಜಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅವಿಭಜಿತ ಶಿವಮೊಗ್ಗದ ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನೆಡೆಯಾದ್ದರಿಂದ ಸೂಕ್ತ ಅಭ್ಯರ್ಥಿ ಯಾರೆಂದು ನೋಡಿದಾಗ ಬಿಜೆಪಿಗೆ ಸಿಗುವುದು ಇಬ್ಬರ ಹೆಸರು.
ಅದರಲ್ಲಿ ಎಂಎಲ್ ಸಿ ಹಾಗೂ ಕೈಗಾರಿಕೋದ್ಯಮಿ ರುದ್ರೇಗೌಡ ಹಾಗೂ ಡಾ. ಧನಂಜಯ್ ಸರ್ಜಿ ಇವರಿಬ್ಬರಲ್ಲಿಯೇ ಸ್ಪರ್ಧೆ ಇದೆ. ನಿಮಗೆ ಅವಕಾಶ ನೀಡಿದರೆ ಸ್ಪರ್ಧಿಸುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಚನ್ನಗಿರಿ ಕ್ಷೇತ್ರದಲ್ಲೀಗಲೇ ಕ್ಲಾರಿಟಿ ಇಲ್ಲ. ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡುತ್ತಾರೆ, ಏನಾಗುತ್ತೆ..? ಮಾಡಾಳ್ ವಿರೂಪಾಕ್ಷಪ್ಪಗೆ ಟಿಕೆಟ್ ನಿರಾಕರಣೆಯಾಗುತ್ತಾ ಯಾವುದೂ ಮಾಹಿತಿ ಇಲ್ಲ. ಪಕ್ಷದ ವರಿಷ್ಠರ ಸೂಚನೆ ಬರಬೇಕು. ಆ ನಂತರ ನಾನು ಕುಟುಂಬದ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ
ಎಂದರು.
ಶಿವಮೊಗ್ಗ ನಗರಕ್ಕೆ ಅಭ್ಯರ್ಥಿ ಆಸಕ್ತಿ ಹೊಂದಿದ್ದೀರಿ ಈಗ ಚನ್ನಗಿರಿಗೂ ನಿಮ್ಮ ಹೆಸರು ಕೇಳಿಬರುತ್ತಿದೆ ಎಂಬ ಮಾತಿಗೆ ಉತ್ತರಿಸಿದ ಸರ್ಜಿ,
ಹೌದು ಶಿವಮೊಗ್ಗ ಆಸಕ್ತಿ ಹೊಂದಿದ್ದೆ. ಆದರೆ ಪಕ್ಷ ಬಯಸಿದ್ದಷ್ಟೇ ನಾನು ಮಾಡಬೇಕು. ಚನ್ನಗಿರಿ ಇರಬಹುದು, ಶಿವಮೊಗ್ಗ ಇರಬಹುದು ವರಿಷ್ಠರು ನಿರ್ಧಾರ ಮಾಡಬೇಕು. ಪಕ್ಷದ ಕೆಲಸ ಮಾಡಿಕೊಂಡಿರು, ಸಂಘಟನೆ ಮಾಡು ಎಂದರೂ ಸಹ ನಾನು ಬದ್ಧನಾಗಿದ್ದೇನೆ. ಪಕ್ಷ ಏನೇ ಜವಾಬ್ದಾರಿ ನೀಡಿದರೂ ನಾನು ಬದ್ಧ