ಒಂಬತ್ತನೇ ತರಗತಿ ವಿದ್ಯಾರ್ಥಿ ಪೂರ್ವಜ್ ಸಾವಿಗೆ ತಲಪಾಡಿಯ ಶಾರದಾ ನಿಕೇತನ ವಸತಿ ಶಾಲೆಯ ಆಡಳಿತ ಮಂಡಳಿಯೇ ನೇರಹೊಣೆ. ಪೂರ್ವಜ್ ದಾರುಣ ಸಾವು ಶೈಕ್ಷಣಿಕ ಹತ್ಯೆಯಾಗಿದ್ದು ಶಾಲೆಯ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಡಿವೈಎಫ್ಐ ದ. ಕ. ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಖಾಸಗಿ ಶಿಕ್ಷಣ ವ್ಯಾಪಾರಿಗಳ ಕೇಂದ್ರ ದ. ಕ. ಜಿಲ್ಲೆಯಲ್ಲಿ ಇಂತಹ ಶೈಕ್ಷಣಿಕ ಹತ್ಯೆಗಳು ಹೊಸದಲ್ಲ. ಈ ಬಾರಿ ಪ್ರೌಢಶಾಲೆಯ ವಿದ್ಯಾರ್ಥಿ ಬಲಿಯಾಗಿರುವುದು ಆಘಾತಕಾರಿ. ಗುಣಮಟ್ಟದ ಶಿಕ್ಷಣ, ಅತ್ಯುತ್ತಮ ಫಲಿತಾಂಶದ ಭ್ರಮೆ ಹುಟ್ಟಿಸಿ ಹೊರ ಜಿಲ್ಲೆಗಳ ಮಧ್ಯಮ, ಮೇಲ್ ಮಧ್ಯಮ ವರ್ಗದ ಪೋಷಕರನ್ನು ದ ಕ ಜಿಲ್ಲೆಯ ಪ್ರತಿಷ್ಟಿತ ಹಣಪಟ್ಟಿಯ ಖಾಸಗಿ ವಸತಿ ಶಾಲೆಗಳು ಆಕರ್ಷಿಸುತ್ತವೆ. ಯಾವುದೇ ಮಾನದಂಡಗಳಿಲ್ಲದೆ ಶುಲ್ಕ, ಡೊನೇಶನ್ ಹೆಸರಿನಲ್ಲಿ ಅಕ್ಷರಶಃ ಸುಲಿಗೆ ಮಾಡುತ್ತವೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ತಮ್ಮ ಮಕ್ಕಳ ಉತ್ತಮ ಭವಿಷ್ಯದ ಕನಸಿನಲ್ಲಿ ಶಾಲಾಡಳಿತ ವಿಧಿಸುವ ಲಕ್ಷಗಟ್ಟಲೆ ಫೀಸುಗಳನ್ನು ಪೋಷಕರು ಕಣ್ಣು ಮುಚ್ಚಿ ಪಾವತಿಸಿ ಮೋಸಹೋಗುತ್ತಾರೆ. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲಿಕ್ಕಾಗಿ ಈ ಖಾಸಗಿ ವಸತಿ ಶಾಲೆಗಳು ಮಕ್ಕಳನ್ನು ಖೈದಿಗಳಂತೆ ಕೂಡಿ ಹಾಕಿ ದಿನಕ್ಕೆ 14 ರಿಂದ 16 ತಾಸು ವಿವಿಧ ರೀತಿಯಲ್ಲಿ ವಿಶ್ರಾಂತಿ ಇಲ್ಲದೆ ಓದಿಸುತ್ತವೆ. ಯಂತ್ರಗಳ ರೀತಿ ಪರಿಗಣಿಸಿ ತಂದೆ ತಾಯಿಗಳ ಭೇಟಿ, ಫೋನ್ ಸಂಪರ್ಕಕ್ಕೂ ನಿಷೇಧ ಹೇರುತ್ತವೆ.
ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ಮಾನಸಿಕ ಕ್ಷೋಭೆ, ಖಿನ್ನತೆಗೆ ಒಳಗಾಗುತ್ತಾರೆ. ಹಲವರು ಅರ್ಧದಲ್ಲೇ ಶಾಲೆ ತೊರೆಯುತ್ತಾರೆ. ಈ ಕುರಿತು ಪೋಷಕರ ದೂರು ಆಲಿಸಲು ಇಲ್ಲಿ ಯಾರೂ ಲಭ್ಯರಿಲ್ಲ. ಇದೆಲ್ಲಾ ಜಿಲ್ಲೆಯ ಶಿಕ್ಷಣ ಇಲಾಖೆ, ಆಡಳಿತದ ಅರಿವಿನಿಂದಲೇ ನಡೆಯುತ್ತಾ ಬಂದಿದೆ. ಬಲಾಢ್ಯ ಆರ್ಥಿಕ, ರಾಜಕೀಯ ಬೆಂಬಲ ಹೊಂದಿರುವ ಇಂತಹ ಶಿಕ್ಷಣ ಸಂಸ್ಥೆಗಳ ಮಾಲಕತ್ವ ನಿಯಮಗಳನ್ನು ಮುರಿದರರೂ ದಕ್ಕಿಸಿಕೊಳ್ಳುವ ಛಾತಿ ಹೊಂದಿವೆ. ಇಂತಹ ಬೆಳವಣಿಗೆಗಳು ಖಾಸಗಿ ಶಿಕ್ಷಣ ಲಾಬಿಯನ್ನು ಮಾಫಿಯ ಸ್ವರೂಪಕ್ಕೆ ಕೊಂಡೊಯ್ದಿದೆ.
ಒಟ್ಟಾರೆ ಈ ಎಲ್ಲಾ ಕಾರಣಗಳು ಒಟ್ಟಾಗಿ ಪೂಜತ್ ಸಾವಿಗೆ ಕಾರಣವಾಗಿದೆ. ಕನಿಷ್ಟ ಹೆತ್ತ ತಾಯಿಗೆ ಹುಟ್ಟಿದ ದಿನದ ಶುಭಾಶಯ ಕೋರಲು ಫೋನ್ ನೀಡಲು ಸಿದ್ದರಿಲ್ಲದಿರುವುದು ಇಂತಹ ವಸತಿ ಶಾಲೆಗಳು ಹಿಂಸಾ ಶಿಬಿರಗಳಾಗಿ ಮಾರ್ಪಾಡಾಗಿರುವುದರ ಸ್ಪಷ್ಟ ಲಕ್ಷಣ. ಇಂತಹ ಅಮಾನವೀಯ ನಡೆಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಲೇಬೇಕಾಗಿದೆ.ಈ ಹಿನ್ನಲೆಯಲ್ಲಿ ಪೂಜತ್ ಸಾವನ್ನು ಶೈಕ್ಷಣಿಕ ಹತ್ಯೆ ಎಂದು ಪರಿಗಣಿಸಬೇಕು, ಶಾರದಾ ನಿಕೇತನ ವಿದ್ಯಾಲಯ ಆಡಳಿತ ಸಮಿತಿಯ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಡಿವೈಎಫ್ಐ ದ. ಕ. ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.