ADVERTISEMENT
ಕರ್ನಾಟಕ ವಿಧಾನಸಭೆಗೆ ಫೆಬ್ರವರಿಯಲ್ಲೇ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅವಧಿಗೆ ಮೊದಲೇ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವ ಬಗ್ಗೆ ಬಿಜೆಪಿ ಯೋಚನೆ ಮಾಡುತ್ತಿದೆ.
16ನೇ ಕರ್ನಾಟಕ ವಿಧಾನಸಭೆಯ ಅವಧಿ ಮುಂದಿನ ವರ್ಷದ ಮೇ 24ರಂದು ಅಂತ್ಯ ಆಗಲಿದೆ.
ಗುಜರಾತ್ ಫಲಿತಾಂಶ ಕಾರಣ:
ಗುಜರಾತ್ನಲ್ಲಿ ಬಿಜೆಪಿ 156 ಸೀಟುಗಳನ್ನು ಗೆದ್ದು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಆ ಐತಿಹಾಸಿಕ ಗೆಲುವಿನ ಪ್ರಭಾವ, ಪರಿಣಾಮಗಳನ್ನು ಕರ್ನಾಟಕ ಚುನಾವಣೆಯಲ್ಲೂ ಬಳಸಿಕೊಳ್ಳಲು ಬಿಜೆಪಿ ಯೋಚಿಸುತ್ತಿದೆ.
ಅಂದರೆ ನಿಗದಿತ ಅವಧಿಗೆ ಚುನಾವಣೆಗೆ ಹೋದರೆ ಅಂದರೆ ಮೇ ವೇಳೆಗೆ ಚುನಾವಣೆ ನಡೆದರೆ ಗುಜರಾತ್ ಪ್ರಭಾವ ಕರ್ನಾಟಕದ ಮೇಲೆ ಇರಲಾರದು ಎನ್ನುವುದು ಬಿಜೆಪಿಯ ಆಲೋಚನೆ.
ಅದಕ್ಕಾಗಿಯೇ ಅವಧಿಗೂ ಮೊದಲೇ ಫೆಬ್ರವರಿ ವೇಳೆಗೆ ಚುನಾವಣೆ ಘೋಷಣೆಯಾದರೆ ಗುಜರಾತ್ ಫಲಿತಾಂಶದ ಕಾವು ಇನ್ನೂ ಇರಲಿದೆ. ಅದು ಕರ್ನಾಟಕದಲ್ಲಿ ಬಿಜೆಪಿಗೆ ಲಾಭದಾಯಕವಾಗಲಿದೆ ಎನ್ನುವುದು ಬಿಜೆಪಿ ನಾಯಕರ ಅಂದಾಜು.
ಬಜೆಟ್ ಯಾವಾಗ..?
ವಿಧಾನಸಭಾ ಚುನಾವಣೆಗೂ ಮೊದಲು ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಲೇಖಾನುದಾನ ಅಥವಾ ಮಧ್ಯಂತರ ಬಜೆಟ್ ಮಂಡನೆ ಮಾಡಬೇಕಾಗುತ್ತದೆ. ಕಳೆದ ವರ್ಷ ಮಾರ್ಚ್ 4ರಂದು ಬೊಮ್ಮಾಯಿ ಬಜೆಟ್ ಮಂಡಿಸಿದ್ದರು.
ಈ ಬಾರಿಯೂ ಕೇಂದ್ರ ಸರ್ಕಾರದ ಬಜೆಟ್ ಫೆಬ್ರವರಿ 1ರಂದು ಮಂಡನೆ ಆಗುವ ಸಾಧ್ಯತೆ ಇದೆ.
ಒಂದು ವೇಳೆ ಅವಧಿಗೂ ಮೊದಲೇ ಚುನಾವಣೆಗೆ ಹೋಗುವುದಾದರೆ ಸಿಎಂ ಬಸವರಾಜ ಬೊಮ್ಮಾಯಿ ಜನವರಿ ಅಥವಾ ಫೆಬ್ರವರಿಯಲ್ಲೇ ಬಜೆಟ್ ಮಂಡನೆ ಮಾಡಿ ವಿಧಾನಸಭೆಯನ್ನು ವಿಸರ್ಜಿಸಬೇಕಾಗುತ್ತದೆ.
ಘೋಷಣೆ ಯಾವಾಗ..?
ವಿಧಾನಸಭಾ ಚುನಾವಣೆ ಘೋಷಣೆ ಮತ್ತು ಫಲಿತಾಂಶ ಪ್ರಕಟವಾಗುವರೆಗೂ ಚುನಾವಣಾ ಪ್ರಕ್ರಿಯೆ ಮುಗಿಯಲು ಒಂದೂವರೆ ತಿಂಗಳು ಬೇಕಾಗುತ್ತದೆ.
ಒಂದು ವೇಳೆ ಫೆಬ್ರವರಿಯಲ್ಲೇ ಚುನಾವಣೆ ಘೋಷಣೆಯಾದ್ರೆ ಮಾರ್ಚ್ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ಚುನಾವಣೆ ಮುಕ್ತಾಯ ಆಗಲಿದೆ.
2018ರಲ್ಲಿ ಮಾರ್ಚ್ 27ರಂದು ಚುನಾವಣೆ ಘೋಷಣೆಯಾಗಿ ಮೇ 12ರಂದು ಫಲಿತಾಂಶ ಪ್ರಕಟವಾಗಿತ್ತು.
ADVERTISEMENT