ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ ತುರ್ತಾಗಿ 40,000 ಟನ್ ಅಕ್ಕಿ ಕಳುಹಿಸಿಕೊಡಲು ಭಾರತ ಮುಂದಾಗಿದೆ. ಅಕ್ಕಿಯ ಸಾಗಾಟ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
2.2 ಕೋಟಿ ಜನಸಂಖ್ಯೆ ಇರುವ ದ್ವೀಪ ರಾಷ್ಟ್ರ ಅತ್ಯಂತ ಕೆಟ್ಟ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇಂಧನ ಆಮದಿಗೆ ವಿದೇಶಿ ವಿನಿಮಯದ ತೀವ್ರ ಕೊರತೆ ಎದುರಾಗಿದೆ. ವಿದ್ಯುತ್ ಕೊರತೆಯಿಂದಾಗಿ ದಿನಕ್ಕೆ 13 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಆಮದಿಗೆ ಪಾವತಿ ಮಾಡಲು ಸಾಧ್ಯವಾಗದೆ ಜಾಗತಿಕ ನೆರವನ್ನು ಕೋರಿದೆ.
ಈಗಾಗಲೇ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಷ ದೇಶದಾದ್ಯಂತ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ವಿದ್ಯುತ್ ಉತ್ಪಾದನೆಗಾಗಿ 6,000 ಮೆಟ್ರಿಕ್ ಟನ್ ಇಂಧನವನ್ನೂ ಭಾರತವು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಅಂತರರಾಷ್ಟ್ರೀಯ ಹಣಕಾಸು ನಿಧಿಯ ನೆರವನ್ನೂ ಶ್ರೀಲಂಕಾ ಕೋರಿದೆ. ಭಾರತ, ಚೀನಾದಿಂದ ಸಾಲದ ನೆರವನ್ನೂ ಕೇಳಿದೆ.