ನ್ಯಾಷನಲ್ ಹೆರಾಲ್ಡ್ ಹಗರಣ (National Herald Scam) ದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕೆಪಿಸಿಸಿ ಅದ್ಯಕ್ಷ ಡಿ ಕೆ ಶಿವಕುಮಾರ್ (KPCC President D K Shivakumar) ಮತ್ತು ಅವರ ಸಹೋದರ, ಸಂಸದ ಡಿ ಕೆ ಸುರೇಶ್ ( MP D K Suresh) ಅವರಿಗೆ ನೋಟಿಸ್ ಜಾರಿ ಮಾಡಿದೆ.
ತೆಲಂಗಾಣ ಕಾಂಗ್ರೆಸ್ (Telagana Congress) ಘಟಕದ ಕಾರ್ಯಾಧ್ಯಕ್ಷರಾದ ಜೆ ಗೀತಾ ರೆಡ್ಡಿ (J Geetha Reddy) ಅವರಿಗೂ ವಿಚಾರಣೆಗೆ ಬರುವಂತೆ ಈಡಿ ನೋಟಿಸ್ ನೀಡಿದೆ.
ಸೆಪ್ಟೆಂಬರ್ 30ರಿಂದ ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ಇಬ್ಬರೂ ಭಾರತ ಒಗ್ಗೂಡಿಸಿ ಪಾದಯಾತ್ರೆಯಲ್ಲಿ ನಿರತರಾಗಿದ್ದಾರೆ. ಪಾದಯಾತ್ರೆಯ ನಡುವೆಯೇ ಇವರಿಬ್ಬರೂ ಈಡಿ (ED) ಮುಂದೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.
ನಾಳೆ ಅಂದರೆ ಅಕ್ಟೋಬರ್ 7 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ED) ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿ ಕೆ ಸುರೇಶ್ ಅವರಿಗೆ ಮತ್ತೆ ಸಮನ್ಸ್ ಜಾರಿ ಮಾಡಿದೆ.
ಈ ಮೊದಲು ದಿನಾಂಕ 23-09-2022 ರಂದು ಇವರಿಬ್ಬರಿಗೂ ಅಕ್ಟೋಬರ್ 7 ರಂದು ವಿಚಾರಣೆಗೆ ಬರುವಂತೆ ಇ ಡಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಭಾರತ್ ಜೋಡೋ ಪಾದಯಾತ್ರೆ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡುವಂತೆ ಶಿವಕುಮಾರ್ ಹಾಗೂ ಸುರೇಶ್ ಅವರು ಪತ್ರ ಬರೆದು ಕೋರಿದ್ದರು.
ಆದರೆ ಅದಕ್ಕೆ ನಿರಾಕರಿಸಿರುವ ಇ ಡಿ 7-10-2022 ರಂದು ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ದಿನಾಂಕ 05-10-2022 ರಂದು ಮತ್ತೊಂದು ನೋಟಿಸ್ ಜಾರಿ ಮಾಡಿದೆ.
ಪಕ್ಷದ ಮುಖಂಡರ ಜತೆ ಸಮಾಲೋಚನೆ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಡಿ ಕೆ ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.