ಮೊಟ್ಟೆ ಎಸೆತವು ನನಗೆ ಹೀಗೆ ಅರ್ಥವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಬಿಜೆಪಿ ಕಾರ್ಯಕರ್ತರ ಕೃತ್ಯಕ್ಕೆ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಾಬಾ ಸಾಹೇಬರು ಹೇಳಿದಂತೆ ಮೇಲ್ವರ್ಗದ ಮನುವಾದಿಗಳು ಹಿಂದುಳಿದ ವರ್ಗಗಳ ಏಳಿಗೆಯನ್ನು ಸಹಿಸುವುದಿಲ್ಲ.
ಹಿಂದುಳಿದ ವರ್ಗದವರು ಉತ್ತಮ ಬಟ್ಟೆ ಹಾಕುವಂತಿಲ್ಲ, ಉತ್ತಮ ಚಪ್ಪಲಿ ಅಥವಾ ವಾಚ್ ಧರಿಸುವಂತಿಲ್ಲ, ಉನ್ನತ ಶಿಕ್ಷಣ ಪಡೆಯುವಂತಿಲ್ಲ
ಸ್ವಂತ ಭೂಮಿಯನ್ನು ಹೊಂದಬಾರದು ಮತ್ತು ಅವರು ಸದಾ ಬೇಡುವ ಸ್ಥಿತಿಯಲ್ಲೇ ಇರಬೇಕು.
ಇನ್ನು ರಾಜಕೀಯವಾಗಿ ನೋಡುವುದಾದರೆ, ಹಿಂದುಳಿದ ವರ್ಗದ ನಾಯಕರು ಎಷ್ಟೇ ಜ್ಞಾನ ಮತ್ತು ಸಾಮರ್ಥ್ಯ ಇದ್ದರೂ ಕೂಡಾ ಅವರು ಮೇಲು ಸ್ತರದ ಮತ್ತು ಫ್ಯೂಡಲ್ ಜಾತಿಗಳಿಗೆ ಬಹಳ ವಿನಯವಂತಿಕೆಯಿಂದಲೇ ಇರಬೇಕು.ಸ್ವಯಂ ಕೋಪ ಮತ್ತು ಬೇಸರ ವ್ಯಕ್ತಪಡಿಸಬಾರದು,
ಅವರು ತಮಗಿಂತ ಎತ್ತರಕ್ಕೆ ಬೆಳೆಯಬಾರದು. ಹೆಚ್ಚಿನ ಜನ ಬೆಂಬಲ ಹೊಂದದೇ ಎಲ್ಲೋ ಒಂದು ಮೂಲೆಯಲ್ಲಿ ಸುಮ್ಮನೇ ಇರಬೇಕು. ಮತ್ತು ಇವರ ಮೂಢ ನಂಬಿಕೆ ಮತ್ತು ಅವೈಜ್ಞಾನಿಕ ಆಷಾಢಭೂತಿ ತನವನ್ನು ಸಹಿಸಿಕೊಂಡು ಜೈಕಾರ ಹಾಕಬೇಕು ಮತ್ತು ನಾವೇ ಅವರಂತೆಯೇ ಬದಲಾಗಬೇಕು ಎಂಬ ಕಾರಣಕ್ಕೇ ಈ ದಿನ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆಯುವ ಕೆಲಸವನ್ನು ಮಾಡಿಸಿದ್ದಾರೆ.
ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಬೇಡ ಎನ್ನುವ ಈ ಮನುವಾದಿಗಳು, ಮತ್ತೊಬ್ಬರಿಗೆ ಹೊಡೆಯಲು ಅದನ್ನು ಬಳಸುತ್ತಾರೆ.
ಆಹಾರವನ್ನು ಅವಮಾನ ಮಾಡಲು ಬಳಸುವುದು, ಅತ್ಯಾಚಾರಿಗಳನ್ನೂ ಜಾತಿ ಆಧಾರಿತವಾಗಿ ಸನ್ಮಾನ ಮಾಡುವುದು ಮನುವಾದಿಗಳು ಮಾತ್ರವೇ ಎಂಬುದು ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಸಂಗತಿ.
ಸಿದ್ದರಾಮಯ್ಯ ಅವರ ಮೇಲೆ ಎಸೆದಿರುವುದು ಕೇವಲ ಮೊಟ್ಟೆಯಲ್ಲ, ಕೆಳವರ್ಗದವರನ್ನು ಕಂಡರೆ ನಮಗೆ ಇಷ್ಟವೇ ಇಲ್ಲ ಎಂಬ RSS ನ ಮೂರನೇ ದರ್ಜೆಯ ಮನೋಧೋರಣೆ
ಆದರೆ ಇಂತಹದ್ದಕ್ಕೆಲ್ಲಾ ಸೊಪ್ಪು ಹಾಕುವ ಮಂದಿ ನಾವಲ್ಲ, ನಮ್ಮೊಳಗೆ ಇರುವುದು ಬಾಬಾ ಸಾಹೇಬರು ಹಚ್ಚಿನ ಅರಿವಿನ ದೀಪವೇ ವಿನಃ, ಮನುವಾದಿಗಳ ವಿಷದ ಬೀಜಗಳಲ್ಲ!
ಎಂದು ಡಾ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.