ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ಚುನಾವಣಾ ಕಣ ಇನ್ನಷ್ಟು ರಂಗೇರಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮನೆ ಮನೆ ಪ್ರಚಾರದ ಜೊತೆಗೆ ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳತೊಡಗಿವೆ. ಈ ವಿಚಾರದಲ್ಲಿ ಆಡಳಿತ ಪಕ್ಷ ಬಿಜೆಪಿಗಿಂತ ವಿರೋಧ ಪಕ್ಷ ಕಾಂಗ್ರೆಸ್ ಮುಂದಿದೆ. ಬಿಜೆಪಿ ವಿರುದ್ಧ 40ಪರ್ಸೆಂಟ್ ಅಸ್ತ್ರ ಸೇರಿ ಹಲವು ಅಸ್ತ್ರಗಳನ್ನು ಪ್ರಯೋಗಿಸಿದೆ. ಇವೀಗ ಟ್ರೆಂಡ್ ಆಗಿವೆ.
#ByeByeBJP ಎಂಬ ಹ್ಯಾಶ್ ಟ್ಯಾಗ್ ಬಳಸಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಟ್ವಿಟ್ಟರ್ ಅಭಿಯಾನ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಸಾರುವ ವೀಡಿಯೋ, ಚಿತ್ರ, ವ್ಯಂಗ್ಯ ಚಿತ್ರ, ಮಾಧ್ಯಮ ವರದಿ ಮತ್ತು ಇತರೆ ಬರಹಗಳನ್ನು ಬಳಸಿಕೊಂಡಿರುವ ಕಾಂಗ್ರೆಸ್ ಸರಣಿ ಟ್ವೀಟ್ ಮಾಡುತ್ತಿದೆ.
ಬಿಜೆಪಿ ನಾಯಕರ ದ್ವೇಷ ಭಾಷಣ, ಕೋಮು ಗಲಭೆ, ನಂದಿನಿ-ಅಮೂಲ್ ವಿವಾದ, ಪೆಸಿಎಂ, ರಸ್ತೆ ಗುಂಡಿ, ಹಿಜಬ್, ಹಲಾಲ್ ಕಟ್, 40 ಪರ್ಸೆಂಟ್ ಕಮೀಷನ್, ಚನ್ನಗಿರಿಯ ಬಿಜೆಪಿ ಶಾಸಕರ ಕೆಎಸ್ಡಿಎಲ್ ಹಗರಣ, ನಿರುದ್ಯೋಗ ಸೇರಿದಂತೆ ಹಲವು ವಿಚಾರ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಅಭಿಯಾನ ನಡೆಸಿದೆ.
40 ಪರ್ಸೆಂಟ್ ಕಮೀಷನ್ ಸರ್ಕಾರಕ್ಕೆ ನನ್ನ ಮತ ಇಲ್ಲ ಎನ್ನುವ ಪೋಸ್ಟರ್ ಹಿಡಿದ ಹಲವರು ವಿಧಾನಸೌಧದ ಮುಂದೆಯೇ ಪೋಸ್ ನೀಡಿದ್ದಾರೆ.
ಈ ಟ್ವಿಟ್ಟರ್ ಅಭಿಯಾನದಲ್ಲಿ ಕೆಪಿಸಿಸಿ, ಯುವ ಕಾಂಗ್ರೆಸ್ ನಾಯಕರು, ಕೇರಳ ಕಾಂಗ್ರೆಸ್, ರಾಜಸ್ಥಾನ ಕಾಂಗ್ರೆಸ್ ಸೇವಾದಳ, ರಾಷ್ಟ್ರೀಯ ನಾಯಕಿ ಅಲ್ಕಾ ಲಂಬಾ ಸೇರಿ ಅನೇಕರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.