ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಬೈಕ್ ಬೆಂಕಿ ಅನಾಹುತಗಳು ಹೊಸದೇನಲ್ಲ.
ಮಹಾರಾಷ್ಟ್ರದ ನಾಸಿಕ್ ಬಳಿ ಕಂಟೈನರ್ ಒಂದು ಧಗಧಗಿಸಿದೆ. ಅದರೊಳಗಿದ್ದ ಹೊಚ್ಚ ಹೊಸ 20 ಎಲೆಕ್ಟ್ರಿಕ್ ಬೈಕ್ ಗಳು ಸುಟ್ಟು ಭಸ್ಮವಾಗಿವೆ.
ನಾಸಿಕ್ ನಲ್ಲಿರುವ ದ್ವಿಚಕ್ರ ವಾಹನ ತಯಾರಿ ಸಂಸ್ಥೆ ಜಿತೇಂದ್ರ ನ್ಯೂ ಇವಿ ಟೆಕ್ ಬೈಕ್ ಸಂಸ್ಥೆಯ ಸಮೀಪದಲ್ಲೇ ಈ ಅವಘಡ ಸಂಭವಿಸಿದೆ.
40 ಇ- ಬೈಕ್ ತುಂಬಿಕೊಂಡು ಬೆಂಗಳೂರಿಗೆ ಹೊರಟು ನಿಂತಿದ್ದ ಕಂಟೈನರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೇಲಿನ ಭಾಗದ ಮೇಲೆ ನಿಲ್ಲಿಸಲಾಗಿದ್ದ 20 ಬೈಕ್ ನೋಡನೋಡುತ್ತಲೇ ಸುಟ್ಟು ಕರಕಲಾಗಿವೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಎಚ್ಚೆತ್ತ ಸಂಸ್ಥೆಯ ಸಿಬ್ಬಂದಿ 20 ಇ- ಬೈಕ್ ಕಾಪಾಡಿದ್ದಾರೆ.
ಕಳೆದ ಮೂರು ವಾರಗಳ ಅವಧಿಯಲ್ಲಿ ಸಂಭವಿಸುತ್ತಿರುವ ಐದನೇ ಪ್ರಕರಣ ಇದು ಎಂಬುದು ಗಮನಾರ್ಹ.
ಮಾರ್ಚ್ 26ರಂದು ತಮಿಳುನಾಡಿನ ವೆಲ್ಲೂರ್ ನಲ್ಲಿ ಓಕಿನೋವ ಬೈಕ್, ಪುಣೆಯಲ್ಲಿ ಓಲಾ ಎಸ್ ಒನ್ ಪ್ರೊ ಎಲೆಕ್ಟ್ರಿಕ್ ಬೈಕ್ ಬೆಂಕಿ ಅನಾಹುತ ಸಂಭವಿಸಿತ್ತು.
ಮಾರ್ಚ್ 28ರಂದು ತಿರುಚ್ಚಿಯಲ್ಲಿ, ಮರುದಿನ ಚೆನ್ನೈ ನಲ್ಲಿ ನಾಲ್ಕನೇ ಅಗ್ನಿ ಘಟನೆ ನಡೆದಿತ್ತು.
ಏಪ್ರಿಲ್ 9ರ ಘಟನೆಗೆ ಸಂಬಂಧಿಸಿದಂತೆ
ನ್ಯೂ ಇವಿ ಟೆಕ್ ಸಂಸ್ಥೆ ತನಿಖೆ ನಡೆಸುವುದಾಗಿ ತಿಳಿಸಿದೆ.
ಎಲೆಕ್ಟ್ರಿಕ್ ಬೈಕ್ ಗಳ ಬೆಂಕಿ ಅವಘಡ ಮೇಲಿಂದ ಮೇಲೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಮುಂದಾಗಿದೆ.
ಎಲೆಕ್ಟ್ರಿಕ್ ಬೈಕ್ ಗಳಲ್ಲಿ ಬಳಸುತ್ತಿರುವ ಬ್ಯಾಟರಿ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಗುಣಮಟ್ಟದ ಕೊರತೆಯ ಕಾರಣ ಇಂತಹ ಘಟನೆ ಆಗುತ್ತಿವೆ ಎಂಬುದು ಪರಿಣಿತರ ಮಾತು.