ವಿಶ್ವ ಆರ್ಥಿಕ ಸಮ್ಮೇಳನಕ್ಕಾಗಿ ದಾವೋಸ್ಗೆ ಹೋಗಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಿಜೆಪಿ ನಡೆಸಿದ್ದ `ಆಪರೇಷನ್ ಕಮಲ’ದ ಸಾಧನೆಯನ್ನು ದೇಶದ ಅತೀ ದೊಡ್ಡ ಖಾಸಗಿ ಉಕ್ಕು ಕಂಪನಿ ಅರ್ಸೆಲರ್ ಮಾಲೀಕ ಲಕ್ಷ್ಮಿ ಮಿತ್ತಲ್ ಅವರಿಗೆ ವಿವರಿಸಬೇಕಾದ ಪ್ರಸಂಗ ಎದುರಾಯಿತು.
ಉದ್ಯಮಿ ಮಿತ್ತಲ್ ಅವರು ಸಂವಾದದ ವೇಳೆ `ವಿಧಾನಸಭೆಯಲ್ಲಿ ನಿಮ್ಮ ಬಲಾಬಲ ಎಷ್ಟು..?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದರು.
ಆಗ `224 ಶಾಸಕರಲ್ಲಿ 119′ ಎಂದು ಬೊಮ್ಮಾಯಿ ವಿತರಿಸಿದರು. `ಹಾಗಾದ್ರೆ 2-3 ಶಾಸಕರ ಬಗ್ಗೆ ಚಿಂತೆ ಮಾಡ್ಬೇಕಿಲ್ಲ..?’ ಎಂದು ಮಿತ್ತಲ್ ಮರು ಪ್ರಶ್ನೆ ಹಾಕಿದರು.
ಆಗ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು `ಆಪರೇಷನ್ ಕಮಲ’ದ ಸಾಧನೆಯ ಬಗ್ಗೆ ವಿವರಿಸಿದರು.
`ನಿಜವಾಗ್ಲೂ ನಾವು 104 ಮಂದಿ ಶಾಸಕರಿದ್ವಿ. 17 ಮಂದಿ ಬೇರೆ ಪಕ್ಷ ಬಿಟ್ಟು ನಮ್ಮ ಪಕ್ಷಕ್ಕೆ ಬಂದರು..’ ಎಂದು ಆಪರೇಷನ್ ಕಮಲದ ಬಗ್ಗೆ ವಿವರಿಸಿದರು.
`ಸರ್ಕಾರ ಸ್ಥಿರವಾಗಿದೆಯಾ’ ಎಂದು ಮಿತ್ತಲ್ ಕೇಳಿದರು. `ಸ್ಥಿರವಾಗಿದೆ’ ಎಂದು ಸಿಎಂ ಬೊಮ್ಮಾಯಿ ಉತ್ತರಿಸಿದರು.
ಈ ವೇಳೆ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವತ್ಥ್ ನಾರಾಯಣ ಕೂಡಾ ಇದ್ದರು.
ಈ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕಾಂಗ್ರೆಸ್ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ
`ತಮ್ಮ ಸರ್ಕಾರ ಆಯ್ಕೆ ಆಗಿದ್ದಲ್ಲ, ಬದಲಿಗೆ ಆಪರೇಷನ್ ಕಮಲದಲ್ಲಿ ಕುದುರೆ ವ್ಯಾಪಾರ ಮೂಲಕ ಬಂದಿದ್ದು ಎಂದು ಉದ್ಯಮಿ ಮಿತ್ತಲ್ ಅವರಿಗೆ ಮುಖ್ಯಮಂತ್ರಿ ವಿವರಿಸಬೇಕಾಗಿದ್ದು ಮುಜುಗರದ ಸಂಗತಿ. `ಆಪರೇಷನ್ ಲೋಟಸ್ ನಿಂದ ಬಿಜೆಪಿ ಸರ್ಕಾರ ಅತೀ ಬೇಗನೇ ಆಪರೇಷನ್ ಲೂಟ್ ಅಸ್ (ನಮ್ಮ ಲೂಟಿ ಮಾಡುವ) ಸರ್ಕಾರವಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.