ಮುಂಬೈ (ಮಹಾರಾಷ್ಟ್ರ): ‘ಅನಿಮಲ್’ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಬಾಲಿವುಡ್ ನಟ ರಣ್ ಬೀರ್ ಕಪೂರ್ ಗೆ ಸಂಕಷ್ಟ ಎದುರಾಗಿದೆ. ಕ್ರಿಸ್ಮಸ್ ಸೆಲೆಬ್ರೇಶನ್ ಗೆ ಸಂಬಂಧಿಸಿದಂತೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ’ದ ಹಿನ್ನೆಲೆಯಲ್ಲಿ ರಣಬೀರ್ ಕಪೂರ್ ವಿರುದ್ಧ ಘಟ್ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಂಬೆ ಹೈಕೋರ್ಟ್ನ ವಕೀಲರಾದ ಆಶಿಶ್ ರೈ ಮತ್ತು ಪಂಕಜ್ ಮಿಶ್ರಾ ಅವರು ದೂರು ಸಲ್ಲಿಸಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ)ಯ 295 ಎ, 298, 500 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಆದ್ರೆ, ಪೊಲೀಸರು ಈ ಪ್ರಕರಣದಲ್ಲಿ ಇನ್ನೂ ಎಫ್ಐಆರ್ ದಾಖಲಿಸಿಲ್ಲ.
ವೈರಲ್ ವಿಡಿಯೋದಲ್ಲೇನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ, ನಟ ರಣ್ಬೀರ್ ಕಪೂರ್ ಅವರು ವೈನ್ ಮತ್ತು ಮದ್ಯವನ್ನು ಕೇಕ್ ಮೇಲೆ ಸುರಿದು ‘ಜೈ ಮಾತಾ ದಿ’ ಎಂದು ಹೇಳಿ ಕೇಕ್ಗೆ ಬೆಂಕಿ ಹಚ್ಚಿದ್ದಾರೆ. ಕುಟುಂಬಸ್ಥರು ಕೂಡ ಆ ವಾಕ್ಯವನ್ನೇ ಜಪಿಸಿದ್ದಾರೆ. ದೂರಿನಲ್ಲಿ, ದೇವತೆಗಳನ್ನು ಆವಾಹಿಸುವ ಮೊದಲು ಹಿಂದೂ ಧರ್ಮದಲ್ಲಿ ಅಗ್ನಿ ದೇವರನ್ನು ಆವಾಹಿಸಲಾಗುತ್ತದೆ. ಆದರೆ ನಟ ರಣಬೀರ್ ಕಪೂರ್ ಮತ್ತು ಅವರ ಕುಟುಂಬಸ್ಥರು ಉದ್ದೇಶಪೂರ್ವಕವಾಗಿ ಕ್ರಿಸ್ಮಸ್ ಆಚರಿಸುವಾಗ ಅಮಲು ಪದಾರ್ಥಗಳನ್ನು ಬಳಸಿ, “ಜೈ ಮಾತಾ ದಿ” ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.