ಚಂದನವನದಲ್ಲಿ ಕಳೆದ ಒಂಬತ್ತು ವರ್ಷದ ಹಿಂದೆ ನಟ ನಿರೂಪ್ ಭಂಡಾರಿ ಹಾಗೂ ಸಾಯಿಕುಮಾರ್ ಕಾಂಬೋದಲ್ಲಿ ಮೂಡಿಬಂದ ರಂಗಿತರಂಗ ಸಿನಿಮಾ ಬಾಹುಬಲಿ ಅಂತರ ಹೈಬಜೆಟ್ ಚಿತ್ರದ ಪೈಪೋಟೊಯೊಂದಿಗೂ ಮೋಡಿ ಮಾಡಿತ್ತು. ಈ ಸಿನಿಮಾದಲ್ಲಿ ನಿರೂಪ್ ಹಾಗೂ ಸಾಯಿ ಕುಮಾರ್ ಇಬ್ಬರೂ ಕಾಂಬಿನೇಷನ್ ಹೈಲೈಟ್ ಆಗಿದ್ದು, ಅದರಲ್ಲೂ ಕ್ಲೈಮ್ಯಾಕ್ಸ್ ಸೀನ್ನಲ್ಲಿ ಸಾಯಿ ಕುಮಾರ್ ಪಾತ್ರವನ್ನು ನೋಡಿದಾಗ ಪ್ರೇಕ್ಷಕರು ಬೆಚ್ಚಿಬಿದ್ದಿದ್ದರು. ನಟ ಸಾಯಿಕುಮಾರ್ ಪೋಸ್ಟ್ ಮ್ಯಾನ್ ಕಾಳಿಂಗನಾಗಿ ಆ ಚಿತ್ರದಲ್ಲಿಅಬ್ಬರಿಸಿದ್ದು, ಇದೀಗ ಮತ್ತೆ ಈ ಜೋಡಿ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದೆ.
ಹೌದು.. ಸಾಯಿ ಕುಮಾರ್ ಹಾಗೂ ನಿರೂಪ್ ಭಂಡಾರಿ ಹೊಚ್ಚ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಅದರಲ್ಲಿ ಇಬ್ಬರು ತಂದೆ-ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. ‘ರಂಗಿತರಂಗ’ ಚಿತ್ರ ರಿಲೀಸ್ ಆಗಿ ಹೆಚ್ಚು ಕಡಿಮೆ 10 ವರ್ಷಗಳಾಗುತ್ತಾ ಬರುತ್ತಿದ್ದು, ಇಂತಹ ಸಮಯದಲ್ಲಿ ಮತ್ತೆ ನಿರೂಪ್ ಭಂಡಾರಿ ಹಾಗೂ ಸಾಯಿ ಜೋಡಿಯನ್ನು ನೋಡುವುದಕ್ಕೆ ಸಿನಿರಸಿಕರು ಎದುರು ನೋಡುತ್ತಿದ್ದಾರೆ.
ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಯುವ ಪ್ರತಿಭೆ ಸಚಿನ್ ವಾಲಿ ಸಾರಥ್ಯದ ಹೊಸ ಸಿನಿಮಾದಲ್ಲಿ ನಿರೂಪ್ ಭಂಡಾರಿ ಹಾಗೂ ಸಾಯಿಕುಮಾರ್ ಒಟ್ಟಿಗೆ ನಟಿಸ್ತಿದ್ದಾರೆ. ಈಗಾಗಲೇ ಸಾಯಿಕುಮಾರ್ ಚಿತ್ರತಂಡ ಸೇರಿದ್ದು ಬಹಳ ವರ್ಷಗಳ ನಂತ್ರ ಈ ಕಾಂಬೋ ಮತ್ತೆ ಒಂದಾಗಿರುವುದು ಕುತೂಹಲ ಹೆಚ್ಚಿಸಿದೆ. ಸಾಯಿಕುಮಾರ್ ಅವರು ನಿರೂಪ್ ಅವರ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ಶೀರ್ಷಿಕೆ ಮತ್ತು ಪರ್ಸ್ಟ್ ಲುಕ್ ಫೆಬ್ರವರಿ 6ಕ್ಕೆ ಅನಾವರಣಗೊಳ್ಳುತ್ತಿದೆ.
ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ಅಂಕೆತ್ ಸಿನಿಮಾಸ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ ನಿರ್ಮಿಸಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.