ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಸಲಾರ್’ ಇದೇ ಡಿಸೆಂಬರ್ 22ರಂದು ತೆರೆ ಕಾಣಲಿದೆ. ಭಾರತೀಯ ಚಿತ್ರರಂಗದ ಬ್ಲಾಕ್ಬಸ್ಟರ್ ಸಿನಿಮಾ ‘ಕೆಜಿಎಫ್’ ಚಿತ್ರತಂಡವೇ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ. ಈ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರವನ್ನೂ ನೀಡಿದೆ.
ಇದೀಗ ಚಿತ್ರತಂಡ ‘ಸಲಾರ್’ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದು, ಪ್ರಭಾಸ್ ಹಾಗೂ ಪೃಥ್ವಿರಾಜ್ ಗೆಳೆತನದ ಆಳವನ್ನು ಹಾಡಿನಲ್ಲಿ ಬಹಳ ಎಮೋಷನಲ್ ಆಗಿ ತೋರಿಸಲಾಗಿದೆ.
ಹೌದು ಚಿತ್ರದ ನಿರ್ಮಾಪಕರು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ‘ಕೆಜಿಎಫ್’ ಕತೆಗೆ ತಾಯಿ ಸೆಂಟಿಮೆಂಟ್ ಪ್ರಧಾನ ಅಂಶವಾಗಿದ್ದರೆ, ‘ಸಲಾರ್’ ಸಿನಿಮಾದ ಕತೆಗೆ ಗೆಳೆತನವೇ ಪ್ರಮುಖವಾಗಿದೆ. ಕನ್ನಡದಲ್ಲಿ ‘ಆಕಾಶ ಗಡಿಯ ದಾಟಿ ತಂದಾನು ಬೆಳಕು ಕೋಟಿ’ ಎಂದು ಹಾಡು ಶುರುವಾಗುತ್ತಿದೆ.
ಹಿಂದಿಯಲ್ಲಿ ಸೂರಜ್ ಹಿ ಚಾವ್ ಬಂಕೆ, ಕನ್ನಡದಲ್ಲಿ ಆಕಾಶ ಗಡಿಯ, ಮಲಯಾಳಂನಲ್ಲಿ ಸೂರ್ಯಂಗಂ ಮತ್ತು ತಮಿಳಿನಲ್ಲಿ ಆಗಸ ಸೂರಿಯನ್ ಎಂದು ಶೀರ್ಷಿಕೆ ನೀಡಲಾಗಿದೆ. ರವಿ ಬಸ್ರೂರ್ ಅವರ ಸಂಗೀತ ಸಂಯೋಜನೆಯೊಂದಿಗೆ ಹಾಡು ಮೂಡಿ ಬಂದಿದೆ. ರವಿ ಬಸ್ರೂರ್ ಅವರು ಎಲ್ಲಾ ಭಾಷೆಗಳಿಗೆ ಸಂಗೀತ ಸಂಯೋಜಿಸಿದರೆ, ಭಾಷೆಗೆ ಅನುಗುಣವಾಗಿ ಗಾಯಕರನ್ನು ಮತ್ತು ಸಾಹಿತ್ಯಗಳನ್ನು ಬದಲಾಯಿಸಲಾಗಿದೆ. ಕನ್ನಡದಲ್ಲಿ ವಿಜಯಲಕ್ಷ್ಮಿ ಮತ್ತು ಕಿನ್ನಲ್ ರಾಜ್, ಚಿತ್ರದ ತೆಲುಗು ಆವೃತ್ತಿಯಲ್ಲಿ ಹರಿಣಿ ಇವತ್ತೂರಿ ದನಿ ನೀಡಿದ್ದು, ಸಾಹಿತ್ಯವನ್ನು ಕೃಷ್ಣಕಾಂತ್ (ಕೆಕೆ) ಬರೆದಿದ್ದಾರೆ. ಮಲಯಾಳಂನಲ್ಲಿ ಇಂದುಲೇಖಾ ವಾರಿಯರ್ ಮತ್ತು ರಾಜೀವ್ ಗೋವಿಂದನ್, ತಮಿಳಿನಲ್ಲಿ ಐರಾ ಉಡುಪಿ ಮತ್ತು ಮಧುರಕವಿ, ಹಿಂದಿಯಲ್ಲಿ ಇಂಡಿಯನ್ ಐಡಲ್ ಖ್ಯಾತಿಯ ಗಾಯಕಿ ಮೇನುಕಾ ಪೌಡೆಲ್ ದನಿ ನೀಡಿದ್ದಾರೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಸಾಂಗ್ ಟ್ರೆಂಡ್ ಆಗಿದ್ದು, ಹಾಡು ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನ ಹಾಡನ್ನು ವೀಕ್ಷಿಸಿದ್ದಾರೆ. ಕನ್ನಡದ ಹಾಡನ್ನು ಒಂದು ಗಂಟೆಯಲ್ಲಿ 1.25 ಲಕ್ಷ ಬಾರಿ ವೀಕ್ಷಿಸಿದ್ದು, ತೆಲುಗಿನಲ್ಲಿ 9 ಲಕ್ಷಕ್ಕೂ ಹೆಚ್ಚು ಬಾರಿ ನೋಡಿದ್ದಾರೆ. ತಮಿಳು ಭಾಷೆಯ ಹಾಡನ್ನು 64 ಸಾವಿರ ಬಾರಿ ವೀಕ್ಷಿಸಲಾಗಿದ್ದು, ಮಲಯಾಳಂ ಸಾಂಗ್ ಅನ್ನು 79 ಸಾವಿರ ಬಾರಿ ವೀಕ್ಷಿಸಲಾಗಿದೆ. ಹಿಂದಿಯ ಹಾಡನ್ನು 3.85 ಲಕ್ಷ ಬಾರಿ ವೀಕ್ಷಿಸಲಾಗಿದೆ.
ಭಾರತೀಯ ಸಿನಿ ಲೋಕದ ಬ್ಲಾಕ್ಬಸ್ಟರ್ ಸಿನಿಮಾ ‘ಕೆಜಿಎಫ್’ನಿಂದಾಗಿ ಹೆಸರುವಾಸಿಯಾಗಿರುವ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವುದರಿಂದ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ ತೆರೆ ಮೇಲೆ ಅಬ್ಬರಿಸಲಿರುವುದರಿಂದ ಈ ಪ್ರಾಜೆಕ್ಟ್ ಮೇಲಿನ ನಿರೀಕ್ಷೆ, ಉತ್ಸಾಹ, ಕುತೂಹಲ ಬೆಟ್ಟದಷ್ಟಿದೆ. ಅಲ್ಲದೇ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಅವರಂತಹ ಸ್ಟಾರ್ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಈಗಾಗಲೇ ಪೃಥ್ವಿರಾಜ್ ಅವರು ತಮ್ಮ ಪಾತ್ರಕ್ಕೆ ಐದು ಭಾಷೆಗಳಲ್ಲೂ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಈ ಬಗ್ಗೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಡಿ.22ರಂದು ‘ಸಲಾರ್: ಪಾರ್ಟ್ 1’ ವಿಶ್ವಾದ್ಯಂತ ಏಕಕಾಲಕ್ಕೆ ಪಂಚಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಅಂದೇ ನಟ ಶಾರುಖ್ ಖಾನ್ ಮುಖ್ಯಭೂಮಿಕೆಯ ‘ಡಂಕಿ’ ಕೂಡ ಬಿಡುಗಡೆ ಆಗಲಿದೆ. ಎರಡೂ ಕೂಡ ಈ ಸಾಲಿನ ಬಹುನಿರಿಕ್ಷೀತ ಸಿನಿಮಾವಾದ ಹಿನ್ನೆಲೆಯಲ್ಲಿ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಪೈಪೋಟಿ ನಡೆಯುವ ನಿರೀಕ್ಷೆ ಇದೆ.