ಬೆಂಗಳೂರು: ಬಾಕ್ಸ್ ಆಫೀಸ್ನಲ್ಲಿ ‘ಸಲಾರ್’ (Salaar Movie) ತನ್ನ ಅಬ್ಬರವನ್ನು ಮುಂದುವರಿಸಿದ್ದು, ಬಿಡುಗಡೆಯಾದ ಮೂರೇ ದಿನಕ್ಕೆ 400 ಕೋಟಿ ರೂ. ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
ಹೌದು ‘ಸಲಾರ್’ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದು, ಈಗಾಗಲೇ ದಾಖಲೆಯ ಕಲೆಕ್ಷನ್ ಮೂಲಕ ಸಿನಿಮಾ ಧೂಳೆಬ್ಬಿಸಿದೆ.
‘ಸಲಾರ್’ ಚಿತ್ರ ಭಾರತದ ಜೊತೆಗೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದು, ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ‘ಸಲಾರ್’ ಸಿನಿಮಾ ಮೂರು ದಿನಕ್ಕೆ 200 ಕೋಟಿ ರೂ. ಗಳಿಸಿದೆ.
ವಿಶ್ವದಾದ್ಯಂತ ಈ ಚಿತ್ರ 400 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇದರೊಂದಿಗೆ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ.
ಸಲಾರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಶುಕ್ರವಾರ (ಡಿ.22) ಬಿಡುಗಡೆಯಾಗಿತ್ತು. ಈ ವರ್ಷ ತೆರೆಕಂಡ ಬಾಲವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ 2 ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಪಠಾಣ್’ ಮತ್ತು ‘ಜವಾನ್’ ಗಳಿಕೆಯನ್ನು ಸಲಾರ್ ಚಿತ್ರ ಹಿಂದಿಕ್ಕಿದೆ.
ಈ ಎರಡೂ ಚಿತ್ರಗಳು ಬಿಡುಗಡೆಯಾದ ಮೊದಲ ದಿನ ವಿಶ್ವದಾದ್ಯಂತ ಕ್ರಮವಾಗಿ 106 ಕೋಟಿ ರೂ. ಮತ್ತು 129.6 ಕೋಟಿ ರೂ. ಗಳಿಸಿತ್ತು. ರಣಬೀರ್ ಕಪೂರ್ ಅವರ ‘ಅನಿಮಲ್’ ಚಿತ್ರವು ಮೊದಲ ದಿನ 116 ಕೋಟಿ ರೂ. ಗಳಿಸಿತ್ತು.
ಸಲಾರ್ ಚಿತ್ರವನ್ನು ಕೆಜಿಎಫ್ ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಿನಿಮಾದಲ್ಲಿ ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು ಮತ್ತು ಶ್ರೀಯಾ ರೆಡ್ಡಿ ಕೂಡ ನಟಿಸಿದ್ದಾರೆ.