ಪಾವಗಡ: ವಿಶ್ವ ಗ್ರಾಮೋದಯ ಟ್ರಸ್ಟ್ ಮತ್ತು ಎಂ ಜಿ ಎಂ ಪ್ರೌಢಶಾಲೆ ಗುಂಡಾರ್ಲಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ಮದ್ದಿಬಂಡೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾಗೂ ಜನ ಜಾಗೃತಿ ಜಾಥಾ ನಡೆಸಿ ಅದ್ದೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಗ್ರಾಮೋದಯ ಸಂಸ್ಥೆಯ ವಿ.ದಾಸಣ್ಣ, ಪರಿಸರದ ಮಹತ್ವ ಹಾಗೂ ಇಂದಿನ ಸಮಸ್ಯೆಗಳ, ಅವುಗಳ ಪರಿಹಾರಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

ಪರಿಸರ ನಾಶ ಹಾಗೂ ಹವಾಮಾನ ವೈಪರಿತ್ಯ ಉಂಟಾಗುತ್ತಿದೆ. ನೀರಿನ ಅಭಾವ ಎದುರಾಗಿದೆ. ತಾಪಮಾನ ಏರುತ್ತಿದೆ. ನಮ್ಮ ಪರಿಸರ ಮತ್ತಷ್ಟು ಹಾಳಾಗದೆ ಇರಲು, ಭೂಮಿ ತಾಯಿಗೆ ಮತ್ತಷ್ಟು ಅಪಾಯ ಉಂಟು ಮಾಡದೇ ಇರಲು, ಕೃಷಿಯಲ್ಲಿ ಸಾವಯವ ಗೊಬ್ಬರ ಬಳಸಿ.. ಮಣ್ಣಿನ ಫಲವತ್ತತೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಿ. ಸರಳ ವಿಧಾನಗಳಿಂದ ಸಹಜವಾಗಿಯೇ ಅಂತರ್ಜಲ ವೃದ್ಧಿಯಾಗಲು, ಜಲ ಮರು ಪುರಣಗೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಗ ಪ್ರಕೃತಿಯೂ ನಮ್ಮನ್ನು ಸಲಹುತ್ತಾಳೆ. ಇದರಿಂದ ಪುನಃ ಮಾನವ ಸಂಬಂಧಗಳು ಬೆಸೆಯಲಿವೆ ಎಂದು ವಿ.ದಾಸಣ್ಣ ಕಿವಿ ಮಾತು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶಿವಣ್ಣ ಸರ್ ಅವರು ಅಧ್ಯಕ್ಷತೆ ವಹಿಸಿದ್ದರು, ಬ್ಯಾಡನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಗೋವಿಂದರಾಜು, ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ, ಎಂ ಜೆ ಕೃಷ್ಣಮೂರ್ತಿ ಭಾಗವಹಿಸಿ ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವನ್ನು ಮೂಡಿಸಿದರು. ಗ್ರಾಮದಲ್ಲಿ ಜಾಥ ಕೂಡ ನಡೆಸಲಾಯಿತು.


ಗಣಿತ ಶಿಕ್ಷಕ ಚಂದ್ರಶೇಖರಯ್ಯ ಸ್ವಾಗತ ಭಾಷಣ ಮಾಡಿದರು. ಸಮಾಜ ವಿಜ್ಞಾನ ಶಿಕ್ಷಕ ದತ್ತಾತ್ರೇಯ ಕಾರ್ಯಕ್ರಮ ನಿರೂಪಣೆ ಮಾಡಿದರು. ಹಿಂದಿ ಶಿಕ್ಷಕರಾದ ಕಾಳೆ ನಾಯಕ್ ವಂದನಾರ್ಪಣೆ ನೆರವೇರಿಸಿಕೊಟ್ಟರು. ಶಾಲೆಯ ಶಿಕ್ಷಕ ಈರಣ್ಣ ಹಾಗೂ ಗುಂಡಾರ್ಲಹಳ್ಳಿ ಪ್ರಮುಖ ಗ್ರಾಮಸ್ಥರು ಹಾಗೂ ಮದ್ದಿ ಬಂಡೆ ಗ್ರಾಮಸ್ಥರೆಲ್ಲರೂ ಸಹ ಭಾಗವಹಿಸಿ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದರು.
