ಸೈದ್ಧಾಂತಿಕವಾಗಿ ವಿರುದ್ಧವಾಗಿರುವ ಮತ್ತು ರಾಷ್ಟ್ರೀಯ ಆಶಯಕ್ಕೆ ಪೂರಕವಲ್ಲದ ಕಾರಣ ಭಾರತ-ಚೀನಾ (India – China) ಸ್ನೇಹ ಸಂಘ ಭಾನುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 28ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ತೈವಾನ್ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಚೀನಾದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಸಾಮ್ರಾಜ್ಯಶಾಹಿಯ ಹಸ್ತಕ್ಷೇಪ ಖಂಡಿಸಿ ಮತ್ತು ಚೀನಾದ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ, ಪಿ ಜಿ ಅರ್ ಸಿಂಧ್ಯಾ, ಕಾಂಗ್ರೆಸ್ ರಾಜ್ಯಸಭಾ ಸಂಸದ ಎಲ್ ಹನುಮಂತಯ್ಯ ಅವರ ಹೆಸರನ್ನು ಮುದ್ರಿಸಲಾಗಿದೆ.
ಈ ಬಗ್ಗೆ ಸಿದ್ದರಾಮಯ್ಯ (Siddaramaiah) ಅವರು ನೀಡಿರುವ ಸ್ಪಷ್ಟನೆ ಹೀಗಿದೆ:
India-China Friendship Association ಭಾನುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಕಂಡು ಆಶ್ಚರ್ಯವಾಯಿತು.
ಸೈದ್ದಾಂತಿಕವಾಗಿ ನನ್ನ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ದವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ.
ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ (H C Mahadevappa) ಅವರ ಸ್ಪಷ್ಟನೆ:
ಕರ್ನಾಟಕದಲ್ಲಿರುವ ಇಂಡೋ – ಚೀನಾ ಸೌಹಾರ್ದ ವೇದಿಕೆಯು ನಮ್ಮ ಗಮನಕ್ಕೆ ತಾರದೆ ನನ್ನೊಡನೆ ಚರ್ಚಿಸದೇ “ಚೀನಾದ ಆಂತರಿಕ ವ್ಯವಹಾರದಲ್ಲಿ ಅಮೆರಿಕಾದ ಹಸ್ತಕ್ಷೇಪ” ಎಂಬ ವಿಷಯದ ಕುರಿತು ಸಂವಾದ ನಡೆಸಲು ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದೆ.
ಈ ಆಹ್ವಾನ ಪತ್ರಿಕೆಯನ್ನು ನೋಡಿದ ದಿನವೇ ಇದೊಂದು ಅಸಂಬದ್ಧ ಹಾಗೂ ನಮ್ಮ ರಾಷ್ಟ್ರೀಯ ಆಶಯಕ್ಕೆ ಪೂರಕವಲ್ಲದ ವಿಷಯ ಎಂದು ಅನ್ನಿಸಿದ್ದರಿಂದ ಈ ಸಂವಾದದಲ್ಲಿ ಪಾಲ್ಗೊಳ್ಳಬಾರದು ಎಂದು ಈಗಾಗಲೇ ನಾನು ನಿರ್ಧರಿಸಿದ್ದೆ
ಆದರೆ ಈ ಸಂಗತಿಯು ಇದೀಗ ಚರ್ಚಾ ವಿಷಯವಾಗಿ ಮುನ್ನಲೆಗೆ ಬಂದಿದ್ದು ” ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತಿದ್ದೇನೆ
ಎಂದು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ಕೋಲಾರ ಶಾಸಕರೇ ಅಧ್ಯಕ್ಷರು:
ವಿಚಿತ್ರ ಎಂದರೆ ಈ ಸ್ನೇಹ ಸಂಘಕ್ಕೆ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ (Kolar MLA Srinivas Gowda) ಅಧ್ಯಕ್ಷರು. ಇವರು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಅಡ್ಡಮತದಾನ ಮಾಡಿದ್ದರು ಮತ್ತು ಕಾಂಗ್ರೆಸ್ ಸೇರಲಿದ್ದಾರೆ.
ADVERTISEMENT
ADVERTISEMENT