ಕೊಳ್ಳೇಗಾಲದ ಮಾಜಿ ಶಾಸಕ ಎಸ್ ಜಯಣ್ಣ ಅವರು ನಿಧನರಾಗಿದ್ದಾರೆ.
ಎಸ್ ಜಯಣ್ಣ ಅವರನ್ನು ಇದೇ ವರ್ಷದ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಬಳಿಕ ಅವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ 1994ರಲ್ಲಿ ಜೆಡಿಎಸ್ ಟಿಕೆಟ್ನಿಂದಲೂ, 2013ರಲ್ಲಿ ಕಾಂಗ್ರೆಸ್ನಿಂದಲೂ ಆಯ್ಕೆಯಾಗಿದ್ದರು.
ಮಾಜಿ ಶಾಸಕ ಎಸ್ ಜಯಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರ ಸಾವಿನ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಜಯಣ್ಣ ಅವರ ಸಾವಿನ ಸುದ್ದಿ ಆಘಾತ ತಂದಿದೆ. ಜಯಣ್ಣ ನನ್ನ ಆತ್ಮೀಯರು. ನಮ್ಮ ನಡುವೆ ದೀರ್ಘಕಾಲದ ಒಡನಾಟವಿತ್ತು. ಇವರು 1994 ರಲ್ಲಿ ಜೆಡಿಎಸ್ ನಿಂದ ಹಾಗೂ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಪಕ್ಷ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಿದ ಜಯಣ್ಣ ಜನಾನುರಾಗಿ ಶಾಸಕರಾಗಿದ್ದರು. ಜನರ ಕಷ್ಟಗಳಿಗೆ ಸದಾ ಮಿಡಿಯುತ್ತಿದ್ದರು.
ಡಿಸೆಂಬರ್ ಏಳರಂದು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜೊತೆಗಿದ್ದರು. ಅವರ ಮನೆಯಲ್ಲಿಯೇ ಊಟ ಮಾಡಿ ಬಂದಿದ್ದನ್ನು ಸ್ಮರಿಸಿದರು ಮುಖ್ಯಮಂತ್ರಿಗಳು, ಜಯಣ್ಣ ಅವರ ಸಾವು ವೈಯಕ್ತಿಕವಾಗಿ ಆಘಾತ ತಂದಿದೆ. ಅವರ ನಿಧನದಿಂದ ಜನಪ್ರಿಯ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.
ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ADVERTISEMENT
ADVERTISEMENT