ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ತಮಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಮುದ್ದಹನುಮೇಗೌಡ ವಾಗ್ದಾಳಿ ನಡೆಸಿದ್ದು, `ಯಾವ ಮಹಾನಾಯಕನಿಂದಲೂ ನನ್ನನ್ನು ತುಳಿಯಲು ಸಾಧ್ಯವಿಲ್ಲ‘ ಎಂದು ಕಿಡಿಕಾರಿದ್ದಾರೆ.
`ನನ್ನನ್ನು ತುಳಿಯಲು ತುಮಕೂರು ಜಿಲ್ಲೆಯ ಜನರಿಂದ ಮಾತ್ರ ಸಾಧ್ಯ‘ ಎಂದಿರುವ ಅವರು, `ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿಯೇ ಮಾಡುತ್ತೇನೆ’ ಎಂದು ಮತ್ತೊಮ್ಮೆ ಡಿಕೆಶಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಕುಣಿಗಲ್ ಕ್ಷೇತ್ರದಲ್ಲಿ ಡಿಕೆಶಿ ಸಂಬಂಧಿ ಡಾ. ರಂಗನಾಥ್ ಸದ್ಯ ಶಾಸಕರಾಗಿದ್ದು, ಮುಂದಿನ ಬಾರಿಯೂ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆ ಇದೆ.
ತುಮಕೂರಿನ ಹೆಬ್ಬೂರಿನಲ್ಲಿ ಮಾತಾಡಿದ ಮುದ್ದಹನುಮೇಗೌಡ,
`ಒಂದು ರಾಷ್ಟ್ರೀಯ ಪಕ್ಷ ವಿನಾಶಕಾರಿ ರಾಜಕಾರಣ ಮಾಡಬಾರದು. ರಚನಾತ್ಮಕ ರಾಜಕಾರಣ ಮಾಡಬೇಕು. ಕಾಂಗ್ರೆಸ್ ವಿನಾಶಕಾರಿ ರಾಜಕಾರಣ ಮಾಡುತ್ತಿದೆ‘
`ನಾನು ಹಾಲಿ ಲೋಕಸಭಾ ಸಂಸದನಾಗಿದ್ದೆ (2019ರಲ್ಲಿ). ನನಗೆ ಟಿಕೆಟ್ ತಪ್ಪಿಸಿದರು. ಮುದ್ದಹನುಮೇಗೌಡರನ್ನು ತುಳಿಯಲೆಂದೇ ಕಾಂಗ್ರೆಸ್ ನನ್ನನ್ನು (ದೇವೇಗೌಡರನ್ನು) ಬಲವಂತವಾಗಿ ತುಮಕೂರಿಗೆ ಕರೆತಂದರು ಎಂದು ದೇವೇಗೌಡರೇ ಹೇಳಿದ್ದಾರೆ. ಇದರ ಹಿಂದೆ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಇದೆ ಎಂದು ಸ್ಪಷ್ಟವಾಗಿದೆ‘
`ರಾಹುಲ್ ಗಾಂಧಿ ಮತ್ತು ಕೆ ಸಿ ವೇಣುಗೋಪಾಲ್ ಈ ಹಿಂದೆ ರಾಜ್ಯಸಭಾ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಎರಡು ಬಾರಿ ಅವಕಾಶ ಕೈ ತಪ್ಪಿಸಿದರು. ನಾನು ಕಾಂಗ್ರೆಸ್ ಬಿಡುವ ಬಗ್ಗೆ ಎಲ್ಲೂ ಹೇಳಿಲ್ಲ. ನನಗೆ ಕಾಂಗ್ರೆಸ್ನಿಂದ ಮೋಸ ಆಗಿರುವುದು ಸತ್ಯ. ಪದೇ ಪದೇ ನನಗೆ ಕಾಂಗ್ರೆಸ್ನಿಂದ ಮೋಸ ಆಗ್ತಿದೆ. ಇದರಿಂದ ಬಹಳ ನೊಂದಿದ್ದೇನೆ‘ ಎಂದು ಮುದ್ದಹನುಮೇಗೌಡ ತಮ್ಮ ಅಸಮಾಧಾನ, ಅಸಹನೆ ಹೊರಹಾಕಿದ್ದಾರೆ.