ವಿಧಾನಸಭೆ ಮಾಜಿ ಸ್ಪೀಕರ್ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷ ಬಿಡುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು ಮೂಲಗಳು ಪ್ರತಿಕ್ಷಣ ನ್ಯೂಸ್ಗೆ ತಿಳಿಸಿವೆ.
2023ರ ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲೇ ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷ ತ್ಯಜಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಆಮ್ ಆದ್ಮಿ ಪಕ್ಷದ ಬಗ್ಗೆ ಒಲವು ಹೊಂದಿರುವ ರಮೇಶ್ ಕುಮಾರ್ ಆ ಪಕ್ಷವನ್ನು ಸೇರಿಕೊಳ್ಳಬಹುದು ಎನ್ನಲಾಗ್ತಿದೆ. ಆಮ್ ಆದ್ಮಿ ಪಾರ್ಟಿ ಕೂಡಾ ರಮೇಶ್ ಕುಮಾರ್ ಅವರನ್ನು ಕರೆದುಕೊಂಡು ಬರಲು ಪ್ರಯತ್ನಿಸುತ್ತಿದೆ.
ಕಾಂಗ್ರೆಸ್ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸುತ್ತಿರುವ ರಮೇಶ್ ಕುಮಾರ್ ಆಮ್ ಆದ್ಮಿ ಪಾರ್ಟಿಯನ್ನು ಹೊಗಳಿ ಟ್ವೀಟ್ಗಳನ್ನು ಮಾಡುತ್ತಿದ್ದಾರೆ.
ಈ ಹಿಂದೆ ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರದ ಶೈಕ್ಷಣಿಕ ಕ್ಷೇತ್ರದ ಸಾಧನೆಗಳ ಬಗ್ಗೆ ಖುದ್ದು ದೆಹಲಿಯಲ್ಲಿನ ಶಾಲೆಗಳಿಗೆ ತೆರಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಗಂಜಿ ಹುಡುಕಿಕೊಳ್ಳುತ್ತಿದೆ:
ಬಾಗೇಪಲ್ಲಿಯಲ್ಲಿ ಸಿಪಿಐಎಂನ ಮಾಜಿ ನಾಯಕ ಜಿ ವಿ ಶ್ರೀರಾಮರೆಡ್ಡಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತಾಡಿದ್ದ ರಮೇಶ್ ಕುಮಾರ್ ಕಾಂಗ್ರೆಸ್ ಗಂಜಿ ಹುಡುಕಿಕೊಳ್ಳುತ್ತಿದೆ ಎನ್ನುವಷ್ಟರ ಮಟ್ಟಿಗೆ ವಾಗ್ದಾಳಿ ನಡೆಸಿದ್ದರು.
ರಾಷ್ಟ್ರಧ್ವಜದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದ ಮತ್ತು ಕೋಮುವಾದವನ್ನು ಜೀವಾಳ ಮಾಡಿಕೊಂಡಿದ್ದ ಆರ್ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ವಿಚಾರಗಳು ಪಠ್ಯ ಸೇರುತ್ತಿದ್ದರೂ ಕಾಂಗ್ರೆಸ್ ಪ್ರತಿಭಟಿಸದಿರುವುದು ಸೋಜಿಗ.
ಮಕ್ಕಳು ಓದುವ ಪಠ್ಯಪುಸ್ತಕಗಳಲ್ಲಿ ಕೋಮುವಾದಿಗಳ ಅಟ್ಟಹಾಸ ಮೆರೆಯುತ್ತಿದೆ. ಮಕ್ಕಳಿಗೆ ವಿಷ ಉಣಿಸಲಾಗುತ್ತಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಹೊತ್ತಿನ ಗಂಜಿ ಹುಡುಕಿಕೊಳ್ಳುತ್ತಿವೆ. ಈ ಪಕ್ಷಗಳಿಗೆ ಕೇವಲ ಹೊತ್ತು ಹೊತ್ತಿಗೆ ಗಂಜಿಯೇ ಮುಖ್ಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧವೇ ಕಿಡಿಕಾರಿದ್ದಾರೆ.
ಆಮ್ ಆದ್ಮಿ ಪಾರ್ಟಿ ಹೊಗಳಿ ಟ್ವೀಟ್:
ಇನ್ನು ಶೇಕಡಾ 1ರಷ್ಟು ಕಮಿಷನ್ ಪಡೆದ ಆರೋಪದಡಿ ಪಂಜಾಬ್ನಲ್ಲಿ ತನ್ನದೇ ಸರ್ಕಾರದ ಸಚಿವನನ್ನು ವಜಾಮಾಡಿ ಆ ಮಂತ್ರಿಯನ್ನು ಬಂಧಿಸಿದ ಆಮ್ ಆದ್ಮಿ ಪಕ್ಷದ ಕ್ರಮದ ಬಗ್ಗೆ ರಮೇಶ್ ಕುಮಾರ್ ಹೊಗಳಿ ಟ್ವೀಟಿಸಿದ್ದಾರೆ.
ನೀವು ದೀರ್ಘಕಾಲದ ರಾಜಕಾರಣಿ ಅಲ್ಲದಿದ್ದರೂ ಈ ದೇಶವನ್ನು ಸ್ವಚ್ಛಗೊಳಿಸಬೇಕೆಂಬ ನಿಮ್ಮ ಉದ್ದೇಶವನ್ನು ಸಾಬೀತುಪಡಿಸಿದ್ದೀರಿ. ಈ ದೇಶದಲ್ಲಿ ಸಾರ್ವಜನಿಕ ಜೀವನಕ್ಕೆ ಅಗತ್ಯ ಇರುವ ಹೊಸ ದೃಷ್ಟಿಕೋನವನ್ನು ನೀಡಿದ್ದೀರಿ ಎಂದು ರಮೇಶ್ ಕುಮಾರ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರನ್ನು ಹೊಗಳಿದ್ದಾರೆ.
2/2 @ArvindKejriwal Though you are not a long standing leader or politician, you have proven that your intent to cleanse the country is enough to bring in the right people. You have provided a new dimension to the public life in this country which was much needed.
— K. R. Ramesh Kumar (@KRRameshKumar1) May 24, 2022