ಹುಬ್ಬಳ್ಳಿಯ ಹೋಟೆಲ್ವೊಂದರಲ್ಲಿ ಮಂಗಳವಾರ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಹತ್ಯೆಯಾಗಿತ್ತು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅವರನ್ನು ಕೊಲೆ ಮಾಡಿರುವುದಾಗಿ ಗುರೂಜಿಯವರ ಮಾಜಿ ಉದ್ಯೋಗಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಸರಳ ವಾಸ್ತು ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ ಗುರೂಜಿ ಅವರನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳಾದ ಮಹಾಂತೇಶ ಶಿರೂರು ಮತ್ತು ಮಂಜುನಾಥ ಮರೇವಾಡ ಅವರನ್ನು ಅದೇ ದಿನ ಬಂಧಿಸಿದ ಪೊಲೀಸರು ನ್ಯಾಯಾಲಯದ ಮುಂದೆ ನಿನ್ನೆ ಹಾಜರುಪಡಿಸಿದ್ದರು.
ಗುರೂಜಿ ಅವರು ರಿಯಲ್ ಎಸ್ಟೇಟ್ ವ್ಯವಹಾರವನ್ನು ಪ್ರಾರಂಭಿಸಿದ್ದರು. ವಾಸ್ತು ಪ್ರಕಾರ ಮನೆ ಮತ್ತು ಅಪಾರ್ಟ್ಮೆಂಟ್ಗಳನ್ನು ನಿರ್ಮಿಸುತ್ತಿದ್ದರು. ಮುಂಬೈ, ಬೆಂಗಳೂರು, ಹುಬ್ಬಳ್ಳಿ ಮತ್ತು ಇತರ ನಗರಗಳಲ್ಲಿ ಕಚೇರಿಗಳನ್ನು ಹೊಂದಿರುವ ಗುರೂಜಿ ಅವರ ಸಂಸ್ಥೆಯು ಭಾರಿ ಮೊತ್ತದ ಹಣವನ್ನು ವಹಿವಾಟುಗಳಿಂದ ಗಳಿಸಿದೆ. ಹಲ್ಲೆಕೋರರಲ್ಲಿ ಒಬ್ಬನಾದ ಮಹಾಂತೇಶ್ ಸೇರಿದಂತೆ ಹಲವು ಉದ್ಯೋಗಿಗಳ ಹೆಸರಿನಲ್ಲಿ ಅಪಾರ ಆಸ್ತಿಯನ್ನು ಗುರೂಜಿ ಹೊಂದಿದ್ದರು. ಗುರೂಜಿಯವರ ಹಣಕಾಸು ನೋಡಿಕೊಳ್ಳುತ್ತಿದ್ದ ಮಹಾಂತೇಶ ಶಿರೂರು ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನೋಂದಣಿಯಾಗಿದೆ.
ಸ್ವತ್ತುಗಳನ್ನು ಹಿಂದಿರುಗಿಸಲು ಒತ್ತಾಯ: ಮಹಾಂತೇಶ್ 2016 ರಲ್ಲಿ ಸರಳ ವಾಸ್ತು ಕೆಲಸ ತೊರೆದಿದ್ದ. ನಂತರ, ಗುರೂಜಿ ಶಿರೂರು ಬಳಿ ಆಸ್ತಿಯನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದರು. ಇದು ಕೊಲೆಗೆ ಕಾರಣವಾಗಿದೆ. 2005 ರಿಂದ 2019 ರವರೆಗೆ ಸರಳ ವಾಸ್ತುವಿನಲ್ಲಿ ಕೆಲಸ ಮಾಡಿದ್ದ ಶಿರೂರು ಅವರ ಪತ್ನಿ ವನಜಾಕ್ಷಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿ ಬಿಡುಗಡೆಮಾಡಿದ್ದರು.
ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ವನಜಾಕ್ಷಿ, ಗುರೂಜಿ ಒಬ್ಬ ಒಳ್ಳೆಯ ವ್ಯಕ್ತಿ, ನನ್ನ ಪತಿ ಅವರನ್ನು ಕೊಂದು ತಪ್ಪು ಮಾಡಿದ್ದಾರೆ. ಹಣಕಾಸಿನ ವಿಚಾರದಲ್ಲಿ ನಮ್ಮ ನಡುವೆ ಯಾವುದೇ ವಿವಾದ ಇರಲಿಲ್ಲ. ನನ್ನ ಗಂಡನ ಹೆಸರಿನಲ್ಲಿರುವ ಗುರೂಜಿ ಆಸ್ತಿ ಬಗ್ಗೆ ನನಗೆ ಗೊತ್ತಿಲ್ಲ. ಕಳೆದ 4-5 ದಿನಗಳಿಂದ ಪತಿ ಮನೆಗೆ ಬಂದಿರಲಿಲ್ಲ. ನಾನು ಅವರನ್ನು ಕೇಳಿದಾಗ, ಬೇರೆ ತುರ್ತು ಕೆಲಸವಿದೆ ಎಂದಿದ್ದರು.