ನಕಲಿ ಜಾತಿ ಪ್ರಮಾಣಪತ್ರ ಪಡೆದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಪುತ್ರಿ ಎಂ.ಆರ್. ಚೇತನ ವಿರುದ್ಧ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಕಲಂ 4(ಎಫ್) ಕರ್ನಾಟಕ ಎಸ್ಸಿ/ಎಸ್ಟಿ ಮತ್ತು ಓಬಿಸಿ ಕಾಯ್ದೆ 1990 ರ ಅಡಿಯಲ್ಲಿ ದೂರು ಸಲ್ಲಿಸಲಾಗಿದೆ.
ಎಸ್ಸಿ ಸಮುದಾಯಕ್ಕೆ ಸೇರಿರುವ, ವಕೀಲ ವೃತ್ತಿಯ ಎ.ಹರಿರಾಂ ಅರ್ಜಿದಾರರಾಗಿದ್ದು, ಅವರ ಪರವಾಗಿ ವಕೀಲರಾದ ಆರ್. ಜಗನ್ನಾಥ, ದಾವಣಗೆರೆಯ ಅನೀಸ್ ಪಾಷ ರಿವಿಜನ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಶಾಸಕ ಎಂ.ಪಿ. ರೇಣುಕಾಚಾರ್ಯ ಲಿಂಗಾಯತ ಸಮುದಾಯಕ್ಕೆ ಸೇರಿದವರು. ತಪ್ಪು ಮಾಹಿತಿ ನೀಡಿ, ತಮ್ಮ ರಾಜಕೀಯ ಪ್ರಾಬಲ್ಯ ಬಳಸಿ, ಪರಿಶಿಷ್ಟ ಜಾತಿಗೆ ಸೇರಿರುವುದಾಗಿ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿರುವುದು ಕಾನೂನು ಬಾಹಿರವಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಯಾವುದೇ ಮೇಲ್ವರ್ಗದ ವ್ಯಕ್ತಿ ಮೋಸದಿಂದ ಎಸ್ಸಿ-ಎಸ್ಟಿ ಅಥವಾ ಓಬಿಸಿ ಎಂಬುದಾಗಿ ಸುಳ್ಳು ಹೇಳಿ ಪ್ರಮಾಣಪತ್ರ ಪಡೆದಲ್ಲಿ ಅದು ಶಿಕ್ಷಾರ್ಹ ಅಪರಾಧ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೊನ್ನಾಳಿಯಲ್ಲಿ ವಾಸವಾಗಿದ್ದರೂ ಬೆಂಗಳೂರಿನ ವ್ಯಾಪ್ತಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯಲಾಗಿದೆ. ಎಲ್ಲ ದಾಖಲಾತಿಗಳನ್ನು ಪಡೆದು, ಪುನರ್ ಪರಿಶೀಲಿಸಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ಪುತ್ರಿ ಎಂ.ಆರ್. ಚೇತನಾ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
https://youtu.be/h7I0nH5ZadI