ಈ ವರ್ಷ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆ (farmers-suicides-decrease) ಆಗಿದೆ ಎಂದು ಕಂದಾಯ ಇಲಾಖೆ ಅಂಕಿಅಂಶ ಹೇಳಿದೆ.
ಕಂದಾಯ ಇಲಾಖೆ ಮಾಹಿತಿ ಪ್ರಕಾರ 2022-23ರ ಅವಧಿಯಲ್ಲಿ ರಾಜ್ಯದಲ್ಲಿ 922 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2023-24ರ ಅವಧಿಯಲ್ಲಿ 1,061 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
2024ರ ಅವಧಿಯಲ್ಲಿ ಡಿಸೆಂಬರ್ 9ರವರೆಗೆ 346 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಂದಾಯ ಇಲಾಖೆ ಅಂಕಿಅಂಶಗಳನ್ನು ಉಲ್ಲೇಖಿಸಿ ಇಂಗ್ಲೀಷ್ ಪತ್ರಿಕೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕಳೆದ ಮೂರು ವರ್ಷಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ 254 ಮಂದಿ ರೈತರು, ಮೈಸೂರು ಜಿಲ್ಲೆಯಲ್ಲಿ 167 ಮಂದಿ ರೈತರು, ಧಾರವಾಡ ಜಿಲ್ಲೆಯಲ್ಲಿ 148 ಮಂದಿ ರೈತರು, ಕಲ್ಬುರ್ಗಿ ಜಿಲ್ಲೆಯಲ್ಲಿ 142 ಮಂದಿ ರೈತರು ಮತ್ತು ಬೆಳಗಾವಿ ಜಿಲ್ಲೆಯಲ್ಲಿ 141 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ 2,329 ಮಂದಿ ರೈತರ ಕುಟುಂಬಗಳ ಪೈಕಿ ತಾಂತ್ರಿಕ ಕಾರಣಗಳಿಂದಾಗಿ 20 ರೈತರ ಕುಟುಂಬಗಳ ರೈತರಿಗೆ ಮಾತ್ರ ಪರಿಹಾರ ವಿತರಣೆ ಬಾಕಿ ಇದೆ. ಉಳಿದ ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಮತ್ತು ಮೃತ ರೈತನ ಪತ್ನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಯನ್ನು ಸರ್ಕಾರ ನೆರವಿನ ರೂಪದಲ್ಲಿ ನೀಡುತ್ತದೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಗ್ರಾಮೀಣ ಭಾಗದಲ್ಲಿ ರೈತ ಕುಟುಂಬಗಳಿಗೆ ಆರ್ಥಿಕ ಅನುಕೂಲವಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ.
ಅಲ್ಲದೇ, ಸಾಲ ಮರು ಪಾವತಿ ಮಾಡಲಾಗದ ರೈತರ ಆಸ್ತಿಯನ್ನು ಜಪ್ತಿ ಮಾಡದಂತೆ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಸಹಕಾರಿ ಸೊಸೈಟಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಆಸ್ತಿ ಜಪ್ತಿ ಬದಲಿಗೆ ರೈತರಿಗೆ ಎಚ್ಚರಿಕೆಯ ನೋಟಿಸ್ನ್ನು ನೀಡುವಂತೆ ಸೂಚಿಸಿತ್ತು. ರಾಜ್ಯ ಸರ್ಕಾರದ ಈ ಸೂಚನೆಯಿಂದಾಗಿ ರೈತರು ನಿರಾಳರಾಗಿರುವುದು ಕೂಡಾ ಆತ್ಮಹತ್ಯೆ ಇಳಿಕೆಗೆ ಪ್ರಮುಖ ಕಾರಣ ಎನ್ನುವುದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಅಭಿಪ್ರಾಯ.
ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ನೀಡಲಾಗುವ ಮಾಸಾಶನ ಮೊತ್ತವನ್ನು 2015ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ತಿಂಗಳಿಗೆ 500 ರೂ.ಗಳಿಂದ 2 ಸಾವಿರ ರೂಪಾಯಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.
ರೈತರ ಆತ್ಮಹತ್ಯೆ ಪ್ರಮಾಣ ಇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಮ್ಮ ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ಪ್ರಶಸ್ತಿ, ಪ್ರಶಂಸೆ ಇನ್ನೇನಿದೆ ಎಂದು ಹೇಳಿದೆ.
ನಮ್ಮ ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ಪ್ರಶಸ್ತಿ, ಪ್ರಶಂಸೆ ಇನ್ನೇನಿದೆ? ಯೂನಿವರ್ಸಲ್ ಬೇಸಿಕ್ ಇನ್ಕಂ ಎಂಬ ಪರಿಕಲ್ಪನೆಯನ್ನು ‘5 ಗ್ಯಾರಂಟಿ’ಗಳ ರೂಪದಲ್ಲಿ ಜಾರಿಗೊಳಿಸಿದ ನಮ್ಮ ಸರ್ಕಾರದ ಯೋಜನೆಗಳು ಫಲ ಕೊಡಲಾರಂಭಿಸಿವೆ. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಈ ವರ್ಷ ಗಮನಾರ್ಹ ಇಳಿಕೆ ಕಂಡುಬಂದಿದೆ. ಇದರಲ್ಲಿ ಗ್ಯಾರಂಟಿಗಳ ಪಾತ್ರ ಎದ್ದು ಕಾಣುತ್ತಿದೆ. ‘ಬಿಟ್ಟಿ ಭಾಗ್ಯಗಳು’ ಎಂದು ಹೀಗಳೆದಿದ್ದ ಬಿಜೆಪಿ, ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಇದೇ ‘ಗ್ಯಾರಂಟಿ’ಗಳನ್ನು ಬೇರೆಬೇರೆ ಹೆಸರುಗಳಲ್ಲಿ ಜಾರಿಗೆ ತರುತ್ತಿದೆ! ಅನ್ನದಾತರ ಹಿತ ಕಾಯುವ ರಾಜ್ಯ ಕಾಂಗ್ರೆಸ್ ಸರ್ಕಾರದ ಬದ್ಧತೆ ಅಚಲ.
ADVERTISEMENT
ADVERTISEMENT