ಈ ಸಾಲಿನ ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ ಪ್ರವಾಸೋದ್ಯಮ, ನವೋದ್ಯಮ, ವಸತಿ ಸೇರಿದಂತೆ ನಾನಾ ವಲಯಗಳಿಗೆ ಮೋದಿ ಸರ್ಕಾರ ಕೊಡುಗೆ ನೀಡಿದೆ.
40 ಸಾವಿರ ಸಾಮಾನ್ಯ ಬೋಗಿಗಳು ವಂದೇ ಭಾರತ್ ರೀತಿಯಲ್ಲಿ ಮೇಲ್ದರ್ಜೆಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಂಗನವಾಡಿ /ಆಶಾ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಭಾರತ್ ವಿಸ್ತರಣೆ ಮಾಡುವ ಮೂಲಕ ಅವರಿಗೂ ಸುಧಾರಿತ ಔಷಧೋಪಚಾರ ಮತ್ತು ಚಿಕಿತ್ಸೆ ನೀಡಲು ಮುಂದಾಗಿದೆ.
ಇನ್ನು ವಸತಿ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳ ನಿರ್ಮಾಣ ಗುರಿ ಹೊಂದಿದ್ದು, ಸ್ವಂತ ಮನೆ ನಿರ್ಮಾಣದ ಕನಸು ಹೊತ್ತ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ನೆರವಾಗಲಿದೆ.
3 ಪ್ರಮುಖ ರೈಲ್ವೇ ಕಾರಿಡಾರ್ ಗಳ ಘೋಷಣೆ ಮಾಡಲು ಕೇಂದ್ರ ನಿರ್ಧರಿಸಿದೆ. ನವೋದ್ಯಮಗಳಿಗೆ ಉತ್ತೇಜನ ನೀಡುವ ಸಲುವಾಗಿ ಮುಂದಿನ 50 ವರ್ಷಗಳಲ್ಲಿ ಉದ್ಯಮಿಗಳಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ರಾಜ್ಯಗಳಿಗೆ 1.3 ಲಕ್ಷ ಕೋಟಿ ರೂಪಾಯಿ ಮೊತ್ತದ ಸಾಲ ಯೋಜನೆ ಮುಂದುವರಿಕೆ ಮಾಡಲಾಗಿದೆ.