ಉಗ್ರರಿಗೆ ಆರ್ಥಿಕ ಸಹಾಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಕೊನೆಗೂ ತಮ್ಮ ತಪ್ಪೊಪ್ಪಿಕೊಂಡಿದ್ದಾರೆ.
2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಅಸ್ಥಿರತೆಗೆ ಕಾರಣವಾಗಿದ್ದ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ದೆಹಲಿ ವಿಶೇಷ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಇದರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಮಾಡಿರುವ ಆರೋಪಗಳೂ ಸೇರಿವೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
ಸೆಕ್ಷನ್ 16 (ಭಯೋತ್ಪಾದನೆ), 17 (ಭಯೋತ್ಪಾದನೆಗೆ ನಿಧಿ ಸಂಗ್ರಹ), 18 (ಭಯೋತ್ಪಾದಕ ಕೃತ್ಯಕ್ಕೆ ಸಂಚು) ಹಾಗೂ 20 (ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿರುವುದು), ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಸೆಕ್ಷನ್ 120–ಬಿ (ಅಪರಾಧ ಸಂಚು) ಮತ್ತು ಭಾರತೀಯ ದಂಡಸಂಹಿತೆಯ 124–ಎ (ದೇಶದ್ರೋಹ) ಪ್ರಕರಣಗಳನ್ನು ಯಾಸಿನ್ ಎದುರಿಸುತ್ತಿದ್ದಾರೆ. ಇವುಗಳ ವಿರುದ್ಧ ವಾದ ಮಂಡಿಸಲು ಬಯಸುವುದಿಲ್ಲ ಎಂದು ಮಲಿಕ್ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಇನ್ನು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಲಿಕ್ಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರು ಮೇ 19ಕ್ಕೆ ನಡೆಸಲಿದ್ದಾರೆ. ಮಲಿಕ್ ವಿರುದ್ಧದ ಆರೋಪಗಳಿಗೆ ಗರಿಷ್ಠ ಜೀವಾವಧಿ ಶಿಕ್ಷೆ ನೀಡಬಹುದಾಗಿದೆ. ಈ ಪ್ರಕರಣದಲ್ಲಿ ಫಾರೂಕ್ ಅಹ್ಮದ್ ಧರ್, ಶಬ್ಬೀರ್ ಶಾ ಸೇರಿದಂತೆ ಅನೇಕ ಪ್ರತ್ಯೇಕತಾವಾದಿ ನಾಯಕರ ವಿರುದ್ಧವೂ ದೋಷಾರೋಪ ಹೊರಿಸಲಾಗಿತ್ತು. ಲಷ್ಕರ್ ಎ ತಯಬಾ ಸಂಸ್ಥಾಪಕ ಹಫೀಜ್ ಸಯೀದ್ ಹಾಗೂ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ವಿರುದ್ಧವೂ ಚಾರ್ಜ್ಶೀಟ್ ಸಲ್ಲಿಕೆಯಾಗಿತ್ತು.