ಮಠದ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಡಾ ಶಿವಮೂರ್ತಿ ಮುರುಘಾ ಶರಣರ (Dr.Shivamurthy Murugha Sharanaru) ಮೇಲೆ ಎಫ್ಐಆರ್ ದಾಖಲಾಗಿದೆ.
ಪೋಕ್ಸೋ ಕಾಯ್ದೆಯಡಿ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಅಂದರೆ ಆಗಸ್ಟ್ 26ರಂದು ಎಫ್ಐಆರ್ ದಾಖಲಾಗಿದೆ.
ಪ್ರಕರಣದಲ್ಲಿ ಮುರುಘಾ ಶರಣರು ಮೊದಲ ಆರೋಪಿ ಆಗಿದ್ದಾರೆ.
ಪೋಕ್ಸೋ ಕಾಯ್ದೆಯ 17,5(ಎಲ್)6, ಐಪಿಸಿ 376(2)(n), 376(3), 149 ಸೆಕ್ಷನ್ನಡಿ ಪ್ರಕರಣ ದಾಖಲಾಗಿದೆ.
ಮೂರುವರೆ ವರ್ಷದಿಂದ ಕಿರುಕುಳ:
ಚಿತ್ರದುರ್ಗದ ಮುರುಘಾ ಮಠದಲ್ಲಿರುವ ವಸತಿ ನಿಲಯದ ವಾರ್ಡನ್ ರಶ್ಮಿ, ಮುರುಘಾಮಠದ ಬಸವಾದಿತ್ಯ, ಮೈಸೂರಿನ ಪರಮಶಿವಯ್ಯ, ಮೈಸೂರು ಮೂಲದ ವಕೀಲ ಗಂಗಾಧರಯ್ಯ ಕ್ರಮವಾಗಿ ಎ2, ಎ3, ಎ4, ಎ5 ಆರೋಪಿಗಳಾಗಿದ್ದಾರೆ.
10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಕೊಟ್ಟ ದೂರಿನ ಮೇರೆ ಎಫ್ಐಆರ್ ದಾಖಲಾಗಿದೆ.
ಇವರಲ್ಲಿ ಒಬ್ಬ ಬಾಲಕಿಯನ್ನು ಮುರುಘಾ ಶರಣರು ಮೂರುವರೆ ವರ್ಷಗಳಿಂದಲೂ ಇನ್ನೊಬ್ಬಳು ಬಾಲಕಿಯ ಒಂದೂವರೆ ವರ್ಷದಿಂದ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರಲಾಗಿದೆ.
ಮುರುಘಾ ಶರಣರ ಕೃತ್ಯಕ್ಕೆ ಮಠದ ಮರಿಸ್ವಾಮಿಗಳಾದ ಬಸವಾದಿತ್ಯ, ಲಾಯರ್ ಗಂಗಾಧರಯ್ಯ, ಲೀಡರ್ ಪರಮಶಿವಯ್ಯ, ವಾರ್ಡನ್ ರಶ್ಮಿ ಸಹಾಯ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ.
ದೌರ್ಜನ್ಯಕ್ಕೊಳಗಾದ ಮಕ್ಕಳು ಮೈಸೂರಿನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಆಧಾರದಲ್ಲಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಆದೇಶ ನೀಡಲಾಗಿತ್ತು. ಆ ಸೂಚನೆ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ವಿಭಾಗದ ಪೊಲೀಸರಿಗೆ ದೂರು ನೀಡಿತ್ತು.
ಶುಕ್ರವಾರ ರಾತ್ರಿ 10 ಗಂಟೆಗೆ ದೂರು ದಾಖಲಾಗಿದೆ.
ಇಬ್ಬರೂ ವಿದ್ಯಾರ್ಥಿನಿಯರಿಗೆ ತಾತ್ಕಾಲಿಕವಾಗಿ ಒಡನಾಡಿ ಸಂಸ್ಥೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ADVERTISEMENT
ADVERTISEMENT