ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯ ನಂತರ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಶಿವಮೊಗ್ಗ ಪೊಲೀಸರು ಇಂದು ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ.
ಕೋರ್ಟ್ ಸೂಚನೆಗೆಯ ಮೇರೆಗೆ ಶಿವಮೊಗ್ಗದ ದೊಡ್ಡಪೇಟೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ, ಶಿವಮೊಗ್ಗದ ಬಿಜೆಪಿ ಕಾರ್ಪೋರೇಟರ್ ಚನ್ನಬಸಪ್ಪ ಅವರ ಮೇಲೆಯೂ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ನಗರದ ನಿವಾಸಿ ರಿಯಾಜ್ ಅಹ್ಮದ್ ಎನ್ನುವವರು ಪ್ರಕರಣ ದಾಖಲಿಸಿದ್ದಾರೆ. ರಿಯಾಜ್ ಅವರು ಕೆಎಸ್ ಈಶ್ವರಪ್ಪನವರ ಪ್ರಚೋದನಾತ್ಮಕ ಹೇಳಿಕೆಯ ನಂತರ ದೊಡ್ಡಪೇಟಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮನವಿ ಮಾಡಿದ್ದರು. ಆದರೆ, ಪೊಲೀಸರು ನಿರಾಕರಿಸಿದ ನಂತರ, ಹೈಕೋರ್ಟ್ಗೆ ಸಚಿವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮಾಡಿದ್ದ ಮನವಿಗೆ ಕೋರ್ಟ್ ಅಸ್ತು ಎಂದಿತ್ತು.
ಈ ಬೆನ್ನಲ್ಲೇ, ಇದೀಗ ಸಚಿವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಚಿವರು ಹರ್ಷ ಕೊಲೆಯ ನಂತರ ಮುಸಲ್ಮಾನ ಗೂಂಡಾಗಳು ಈ ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ನಂತರ ಹರ್ಷ ಶವಯಾತ್ರೆಯ ವೇಳೆಯೂ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಶವಯಾತ್ರೆ ವೇಳೆ ಉದ್ರಿಕ್ತರ ಗುಂಪು ಹಲವು ವಾಹನಗಳಿಗೆ ಬೆಂಕಿ ಹಚ್ಚಿತ್ತು. ಶಿವಮೊಗ್ಗದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ 7 ದಿನಗಳ ಕಾಲ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿತ್ತು.
ಹರ್ಷ ಕೊಲೆಗೆ ಸಂಬಂಧಿಸಿದಂತೆ 10 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಈ ಪ್ರಕರಣವನ್ನು ಎನ್ಐಎ(National Investigation Agency) ವಹಿಸಿಕೊಂಡಿದೆ.