ಮೈಸೂರಿನ ಆರ್ಟಿಐ ಕಾರ್ಯಕರ್ತ ಗಂಗರಾಜು ಮೇಲಿನ ಹಲ್ಲೆ ಆರೋಪದಡಿ ಶಾಸಕ ಸಾ.ರಾ.ಮಹೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೈಸೂರಿನ ಆರ್ಟಿಐ ಕಾರ್ಯಕರ್ತ ಗಂಗರಾಜು ಶಾಸಕ ಸಾರಾ ಮಹೇಶ್ ನಿದ್ದೆ ಗೆಡಿಸಿದ್ದಾರೆ. ಸಾರಾ ಮಹೇಶ್ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದ ಗಂಗರಾಜು, ತನ್ನ ಮೇಲೆ ಸಾರಾ.ಮಹೇಶ್ ಕುಮ್ಮಕ್ಕಿನಿಂದ ಅವರ ಬೆಂಬಲಿಗರು ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ನೆನ್ನೆ ಸಂಜೆ ಎ1 ಆರೋಪಿಯನ್ನಾಗಿ ಲೋಕೇಶ್ ಅಲಿಯಾಸ್ ರಘು ಹಾಗೂ ಎರಡನೇ ಆರೋಪಿಯನ್ನಾಗಿ ಸಾರಾ.ಮಹೇಶ್ ಹೆಸರನ್ನು ನಮೂದಿಸಿ ಎಫ್ಐಆರ್ ದಾಖಲು ಮಾಡಿದ್ದರು.
ಇದರಿಂದ ಕೆರಳಿದ ಸಾರಾ ಮಹೇಶ್ ತಡರಾತ್ರಿ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ತೆರಳಿ ಧರಣಿ ಕುಳಿತಿದ್ದಾರೆ. ಬನ್ನಿ ನನ್ನನ್ನ ಬಂಧಿಸಿ ಎಂದು ಹೇಳಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸದೆ ಏಕಾಏಕಿ ಎಫ್ಐಆರ್ ದಾಖಲು ಮಾಡಿರುವುದರ ಹಿಂದೆ ನನ್ನ ವಿರುದ್ದ ಷಡ್ಯಂತ್ರ ರೂಪಿಸಲಾಗಿದೆ. ನಾನು ಸ್ವಿಮ್ಮಿಂಗ್ ಪೂಲ್, ಬಟ್ಟೆ ಬ್ಯಾಗ್ ಖರೀದಿ ಹಗರಣ ಸಂಬಂಧ ಹೋರಾಟ ಮಾಡುತ್ತಿದ್ದರೂ ನ್ಯಾಯ ಸಿಗುತ್ತಿಲ್ಲ, ಆದರೆ ಇಂದು ನನ್ನ ವಿರೋಧಿಗಳ ಜೊತೆ ಸೇರಿ ಷಡ್ಯಂತ್ರ ರೂಪಿಸಿರುವ ಈ ಆರ್ಟಿಐ ಕಾರ್ಯಕರ್ತ ದೂರು ಕೊಟ್ಟ ಕೂಡಲೇ ಎಫ್ಐಆರ್ ದಾಖಲು ಮಾಡಿರೋದು ಎಷ್ಟು ಸರಿ. ಹಿಂದೆ ಲಾಂಗು ಮಚ್ಚು ಹಿಡಿದು ಬೆದರಿಸಿ ವಸೂಲಿ ಮಾಡುವ ರೌಡಿಗಳಿದ್ದರು. ಆದರೆ ಇಂದು ಪೆನ್ನು ಹಿಡಿದು ವಸೂಲಿ ಮಾಡುವ ನಕಲಿ ಆರ್ಟಿಐ ಕಾರ್ಯಕರ್ತರು ಹುಟ್ಟಿಕೊಂಡಿದ್ದಾರೆ, ಅದರಂತೆ ಈತನ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಾರಾ ಮಹೇಶ್ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಎಸಿಪಿ ನೇತೃತ್ವದಲ್ಲಿ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಸಾ.ರಾ.ಮಹೇಶ್ ಮನವೊಲಿಸಿದ್ದಾರೆ.