ಸಿಕಿಂದ್ರಾಬಾದ್ ನಲ್ಲಿ (Secunderabad) ತಡರಾತ್ರಿ ಘನಘೋರ ದುರಂತ ಸಂಭವಿಸಿದೆ. ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸಿ ಲಾಡ್ಜ್ ನಲ್ಲಿ ಏಳು ಮಂದಿ ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ.
ಮೂವರು ಸ್ಥಳದಲ್ಲೇ ಮೃತಪಟ್ಟರೆ ನಾಲ್ವರು ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮೃತರಲ್ಲಿ ಆರು ಮಂದಿ ಪುರುಷರಿದ್ದಾರೆ. ಎಲ್ಲರ ವಯಸ್ಸು 35-45 ಇರಬಹುದು ಎಂದು ಅಂದಾಜಿಸಲಾಗಿದೆ.
ಮೃತರ ಪೈಕಿ ಚೆನ್ನೈ, ದೆಹಲಿ, ವಿಜಯವಾಡದ ತಲಾ ಒಬ್ಬರಿದ್ದಾರೆ. ಉಳಿದವರ ಗುರುತು ಪತ್ತೆ ಆಗಬೇಕಿದೆ. ಗಾಯಳುಗಳಿಗೆ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿಕಿಂದ್ರಾಬಾದ್ ನ ಪಾಸ್ಪೋರ್ಟ್ ಕಚೇರಿ (Passport office) ಬಳಿಯ ರೂಬಿ ಲಗ್ಜುರಿ ಪ್ರೈಡ್ (Ruby luxury pride)ಹೆಸರಿನ ಐದು ಅಂತಸ್ತಿನ ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿ ರೂಬಿ ಎಲೆಕ್ಟ್ರಿಕ್ ವಾಹನಗಳ (Ruby electric vehicle)ಮಳಿಗೆ ಇದೆ. ರಾತ್ರಿ 9.40ರ ಸುಮಾರಿಗೆ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಹಂತ ಹಂತವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಆವರಿಸಿ ಬ್ಯಾಟರಿಗಳೆಲ್ಲ ಸ್ಪೋಟಿಸಲು ಆರಂಭಿಸಿದವು.
ಇದರ ಹೊಗೆಯೆಲ್ಲಾ ಶೋ ರೂಮ್ ಮೇಲಿನಭಾಗದಲ್ಲಿ ಇರುವ ಲಾಡ್ಜ್ ಒಳಗೆ ಆವರಿಸಿದೆ. 23 ಕೊಠಡಿಗಳ ಲಾಡ್ಜ್ ನಲ್ಲಿ 25 ಮಂದಿ ಇದ್ದರು. ಇವರಿಗೆಲ್ಲ ಉಸಿರಾಡಲು ಸಾಧ್ಯ ಆಗದೆ ಎಲ್ಲೆಲ್ಲಿದ್ದರೋ ಅಲ್ಲಲ್ಲೇ ಕುಸಿದು ಮೂರ್ಛೆ ಹೋಗಿದ್ದಾರೆ. ಕೆಲವರು ಸಾವನ್ನಪ್ಪಿದ್ದಾರೆ. ನಾಲ್ವರು ಪ್ರಾಣ ಉಳಿಸಿಕೊಳ್ಳಲು ಕಟ್ಟಡದ ಮೇಲಿಂದ ಕೆಳಕ್ಕೆ ಜಿಗಿದಿದ್ದಾರೆ. ಈ ಪೈಕಿ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಒಟ್ಟು 13ಮಂದಿ ಗಾಯಗೊಂಡಿದ್ದು,ಹಲವರ ಸ್ಥಿತಿ ಗಂಭೀರವಾಗಿದೆ.