ಬಿಹಾರದ ಸರನ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಖುದಾಯಿ ಬಾಗ್ ಗ್ರಾಮದಲ್ಲಿ ಭಾನುವಾರ ಪಟಾಕಿ ಉದ್ಯಮಿಯೊಬ್ಬರ ಮನೆಯಲ್ಲಿ ಸ್ಫೋಟ ಸಂಭವಿಸಿ ಆರು ಜನರು ಸಾವಿಗೀಡಾಗಿದ್ದಾರೆ.
ಉದ್ಯಮಿಯನ್ನು ಶಬೀರ್ ಹುಸೇನ್ ಎಂದು ಗುರುತಿಸಲಾಗಿದೆ. ಸ್ಫೋಟದಿಂದಾಗಿ ಮನೆಯ ಒಂದು ಭಾಗ ಸ್ಫೋಟಗೊಂಡಿದ್ದು, ಉಳಿದ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಎಂಟು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಗಾಯಾಳುಗಳನ್ನು ಛಾಪ್ರಾದ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಎಂಟು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.ಈ ಗ್ರಾಮವು ಜಿಲ್ಲಾ ಕೇಂದ್ರ ಛಾಪ್ರಾದಿಂದ ಸುಮಾರು 30 ಕಿಮೀ ದೂರದಲ್ಲಿದೆ.
ಛಾಪ್ರಾದಲ್ಲಿ ಸ್ಫೋಟದಿಂದಾಗಿ ಮನೆ ಕುಸಿದು ಆರು ಜನರು ಸಾವಿಗೀಡಾಗಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸ್ಫೋಟದ ಹಿಂದಿನ ಕಾರಣವನ್ನು ನಾವು ತನಿಖೆ ಮಾಡುತ್ತಿದ್ದೇವೆ. ವಿಧಿವಿಜ್ಞಾನ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನು ಸಹ ಕರೆಯಲಾಗಿದೆ” ಎಂದು ಸರನ್ ಎಸ್ಪಿ ಸಂತೋಷ್ ಕುಮಾರ್ ಹೇಳಿದರು.
ಪೊಲೀಸರ ಪ್ರಕಾರ, ಸ್ಫೋಟ ಸಂಭವಿಸಿದ ಮನೆಯೊಳಗೆ ಪಟಾಕಿಗಳನ್ನು ತಯಾರಿಸಲಾಯಿತು ಮತ್ತು ಒಂದು ಗಂಟೆಗಳ ಕಾಲ ನಿರಂತರವಾಗಿ ಸ್ಫೋಟಗಳು ಕೇಳಿಬಂದವು.
ಉದ್ಯಮಿ ಮದುವೆ ಸೀಸನ್ನಲ್ಲಿ ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಮನೆಯು ಅಕ್ರಮವಾಗಿ ಪಟಾಕಿ ತಯಾರಿಕಾ ಘಟಕವಾಗಿತ್ತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ವರದಿಯ ಪ್ರಕಾರ, ಸ್ಫೋಟದ ತೀವ್ರತೆಯಿಂದ ಮನೆಗೆ ತೀವ್ರ ಹಾನಿಯಾಗಿದೆ. ಮಾತ್ರವಲ್ಲದೆ ಅಕ್ಕಪಕ್ಕದ ಆರಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.