ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣ ಸಂಬಂಧ ಇದೀಗ ಮೃತರ ಕುಟುಂಬಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಪರಿಹಾರ ಘೋಷಿಸಿದ್ದಾರೆ.
ಘಟನೆ ಸಂಬಂಧ ಸಚಿವ ಹಾಲಪ್ಪ ಆಚಾರ್ ಅವರ ಮನವಿ ಹಿನ್ನೆಲೆ ಸಿಎಂ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಿಎಂ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಭಾನಾಪೂರ ಬಳಿ ಶನಿವಾರ ರಾತ್ರಿ 10:30ರ ಸುಮಾರಿಗೆ ಲಾರಿಯೊಂದು ಸ್ಕಾರ್ಪಿಯೋ ಕಾರಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಐವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಇದೀಗ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ್ ಕುಟುಂಬದ ಜೊತೆ ಸಂಬಂಧಿಯ ಮಗನ ಬರ್ತ್ ಡೇ ಆಚರಿಸಲು ಕೊಪ್ಪಳಕ್ಕೆ ಬಂದಿದ್ದರು. ರಾತ್ರಿ ಹುಟ್ಟುಹಬ್ಬ ಮುಗಿಸಿಕೊಂಡು ಮರಳಿ ಬಿನ್ನಾಳ ಗ್ರಾಮಕ್ಕೆ ಬರುತ್ತಿದ್ದ ವೇಳೆ ಅಪಘಾತವಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕಾರ್ಪಿಯೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಶವಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಗಿತ್ತು. ಸ್ಥಳಕ್ಕೆ ಕೊಪ್ಪಳ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.