ಪಾಕಿಸ್ತಾನದಲ್ಲಿ ಭೀಕರ ಪ್ರವಾಹ (flood in Pakistan) ಪರಿಸ್ಥಿತಿ ಎದುರಾಗಿದೆ. ಈ ಭೀಕರ ಪ್ರವಾಹದಲ್ಲಿ ಇದುವರೆಗೂ ಸುಮಾರು 1,300 ಜನ ಸಾವನ್ನಪ್ಪಿದ್ದಾರೆ, 5 ಲಕ್ಷ ಜನ ನಿರಾಶ್ರಿತರಾಗಿದ್ದಾರೆ ಎಂದು ವರದಿಯಾಗಿದೆ.
ಜೂನ್ನಿಂದ ಇಲ್ಲಿಯವರೆಗೆ ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 1,290 ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 29 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಶನಿವಾರ ತಿಳಿಸಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಈ ಮಧ್ಯೆ, ಪಾಕಿಸ್ತಾನದ ಸರ್ಕಾರಿ ಏಜೆನ್ಸಿಗಳು ಮತ್ತು ಖಾಸಗಿ ಎನ್ಜಿಒಗಳು ತಮ್ಮ ಪರಿಹಾರ ಕಾರ್ಯಾಚರಣೆಗಳನ್ನು ಮುಂದುವರೆಸಿವೆ.
ಪಾಖಿಸ್ತಾನದ ದೊಡ್ಡ ಭಾಗಗಳು ಮುಳುಗಡೆಯಾಗಿವೆ. ವಿಶೇಷವಾಗಿ ದಕ್ಷಿಣದಲ್ಲಿ ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ ಮತ್ತು ಸಿಂಧ್ ಪ್ರಾಂತ್ಯಗಳು. ಸಿಂಧ್ನಲ್ಲಿ ಕನಿಷ್ಠ 180 ಜನರು ಸಾವನ್ನಪ್ಪಿದ್ದಾರೆ, ನಂತರ ಖೈಬರ್ ಪಖ್ತುಂಕ್ವಾ (138) ಮತ್ತು ಬಲೂಚಿಸ್ತಾನ್ (125) ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ
ಕನಿಷ್ಠ, 1,468,019 ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ, 736,459 ಜಾನುವಾರುಗಳು ಪ್ರವಾಹದಿಂದಾಗಿ ಸಾವನ್ನಪ್ಪಿವೆ.
ಹಾನಿಯ ಆರಂಭಿಕ ಅಂದಾಜನ್ನು 10 ಶತಕೋಟಿ ಅಮೇರಿಕನ್ ಡಾಲರ್ ಎಂದು ಲೆಕ್ಕ ಹಾಕಲಾಗಿದೆ. ಈ ಬಗ್ಗೆ ಇನ್ನೂ ಸಮೀಕ್ಷೆಗಳು ಮುಂದುವರೆದಿವೆ.
ಇಂದು ಮುಂಜಾನೆ, ರಾಷ್ಟ್ರೀಯ ಪ್ರವಾಹ ಪ್ರತಿಕ್ರಿಯೆ ಮತ್ತು ಸಮನ್ವಯ ಕೇಂದ್ರದಲ್ಲಿ ಮಿಲಿಟರಿ ಅಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ಅವರು, ಪಾಕಿಸ್ತಾನಕ್ಕೆ ಸಹಾಯಹಸ್ತ ಚಾಚುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಇಸ್ಲಾಮಾಬಾದ್ನಲ್ಲಿ ಶನಿವಾರ ಬೆಳಿಗ್ಗೆ ಫ್ರಾನ್ಸ್ನಿಂದ ಮೊದಲ ಮಾನವೀಯ ನೆರವು ವಿಮಾನ ಇಳಿಯುವುದರೊಂದಿಗೆ, ಹಲವಾರು ದೇಶಗಳಿಂದ ನೆರವು ಹರಿದು ಬರಲು ಆರಂಭಿಸಿದೆ.
ಪಾಕಿಸ್ತಾನದಲ್ಲಿ ಈ ಭೀಕರ ಪ್ರವಾಹ (flood in Pakistan) ದೇಶದ ಮೂರನೇ ಒಂದು ಭಾಗವನ್ನು ಮುಳುಗಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಪಾಕಿಸ್ತಾನದ ಖ್ಯಾತ ಅಂಪೈರ್ ಈಗ ಶೂ, ಬಟ್ಟೆ ವ್ಯಾಪಾರಿ