ಬೆಳಗ್ಗಿನ ಉಪಹಾರವು ಯಾವಾಗಲೂ ಪೋಷಕಾಂಶಗಳಿಂದ ಕೂಡಿರಬೇಕು. ಏಕೆಂದರೆ ರಾತ್ರಿಯಿಂದ ನಮ್ಮ ದೇಹಕ್ಕೆ ಯಾವುದೇ ಆಹಾರ ದೊರೆತಿರುವುದಿಲ್ಲ. ಶರೀರವು ಬಳಲಿರುತ್ತದೆ. ಇಂತಹ ಪೋಷಕಾಂಶಯುಕ್ತ ಆಹಾರದಲ್ಲಿ ಒಂದು ಗೋಧಿ ನುಚ್ಚಿನ ಕಿಚಡಿ. ಈ ಉಪಹಾರವು ವಿಶೇಷ ತರಕಾರಿಗಳಿಂದ ಕೂಡಿದ್ದು, ಇದರಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ ಇರುವುದರಿಂದ ಸರಳವಾದ ಹಾಗೂ ಆರೋಗ್ಯಕರವಾದ ತಿಂಡಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಆರೋಗ್ಯಕ್ಕೆ ಅಗತ್ಯವಾಗುವ ಕಬ್ಬಿಣಾಂಶ ಮತ್ತು ನಾರಿನಂಶ ಸಮೃದ್ಧವಾಗಿ ಇರುವುದರಿಂದ ಜೀರ್ಣಕ್ರಿಯೆಯು ಉತ್ತಮವಾಗಿ ನಡೆಯುತ್ತದೆ.
ಬಹಳ ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಈ ಆಹಾರವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಬೆಳೆಯುತ್ತಿರುವ ಮಕ್ಕಳಿಗೆ ಹಾಗೂ ಶಕ್ತಿಯನ್ನು ಕಳೆದುಕೊಂಡಿರುವ ವೃದ್ಧರಿಗೆ ತರಕಾರಿ ಡಾಲಿಯಾ ಅತ್ಯುತ್ತಮವಾದ ಉಪಹಾರವಾಗುವುದು. ನೀವು ನಿಮ್ಮ ಮನೆಯವರಿಗಾಗಿ ಆರೋಗ್ಯಕರವಾದ ತಿಂಡಿಯನ್ನು ತಯಾರಿಸಿ ಸವಿಯಲು ನೀಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ ಹೂಕೋಸು
1 ಕಪ್ ನುಚ್ಚು ಗೋಧಿ
1 ಕಪ್ ಕತ್ತರಿಸಿದ ಕ್ಯಾರೆಟ್
1 ಕಪ್ ಬಟಾಣಿ
1 ಕಪ್ ಕತ್ತರಿಸಿದ ದುಂಡು ಮೆಣಸಿನಕಾಯಿ
1 ಕಪ್ ಕತ್ತರಿಸಿದ ಟೊಮೆಟೋ
1 ಕಪ್ ಕತ್ತರಿಸಿದ ಈರುಳ್ಳಿ
ಅಗತ್ಯಕ್ಕೆ ತಕ್ಕಷ್ಟು ಅರಿಶಿಣ
1 ಅಗತ್ಯಕ್ಕೆ ತಕ್ಕಷ್ಟು ಕೆಂಪು ಮೆಣಸು
1 ಅಗತ್ಯಕ್ಕೆ ತಕ್ಕಷ್ಟು ಉಪ್ಪು
1 ಚಮಚ ನಿಂಬೆ ಜ್ಯೂಸ್
ಕೊತ್ತಂಬರಿ ಸೊಪ್ಪು
ಹುರಿದ ಜೀರಿಗೆ
1 ಚಮಚ ತುಪ್ಪ
ತಯಾರಿಸುವ ವಿಧಾನ:
– ಒಂದು ಬಾಣಲೆಯಲ್ಲಿ ತುಪ್ಪವನ್ನು ಸೇರಿಸಿ ಬಿಸಿ ಮಾಡಿ. ಬಿಸಿಯಾದ ತುಪ್ಪಕ್ಕೆ ಗೋಧಿ ನುಚ್ಚನ್ನು ಸೇರಿಸಿ, 3-4 ನಿಮಿಷಗಳ ಕಾಲ ಹುರಿಯಿರಿ.
– ಕುಕ್ಕರ್ ಪಾತ್ರೆಯಲ್ಲಿ, ಗೋಧಿ ನುಚ್ಚು ಪ್ರಮಾಣದ ಮೂರು ಪಟ್ಟು (3:1 ಅನುಪಾತ) ಅಳತೆಯಲ್ಲಿ ನೀರನ್ನು ಸೇರಿಸಿ, ಕುದಿಯಲು ಬಿಡಿ. ನೀರು ಕುದಿಯಲು ಪ್ರಾರಂಭಿಸಿದ ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಗೋಧಿ ನುಚ್ಚನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ. ಗೋಧಿ ಚೆನ್ನಾಗಿ ಬೇಯುವಂತೆ 2 ಸೀಟಿ ಕೂಗಿಸಿಕೊಳ್ಳಿ.
– ಇನ್ನೊಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ಇದಕ್ಕೆ ಹೆಚ್ಚಿಕೊಂಡ ಈರುಳ್ಳಿ, ಟೊಮ್ಯಾಟೊ, ಹೂಕೋಸು, ಕ್ಯಾರೆಟ್ ಮತ್ತು ಬಟಾಣಿಯನ್ನು ಹಾಕಿ ಬೇಯಿಸಿ. ಟೊಮ್ಯಾಟೊ ಹಸಿ ವಾಸನೆ ಹೋಗುವ ಹಾಗೆ ಮತ್ತು ತರಕಾರಿಗಳು ಚೆನ್ನಾಗಿ ಬೇಯುವ ಹಾಗೆ ಮುಚ್ಚಳವನ್ನು ಮುಚ್ಚಿ ಸ್ವಲ್ಪ ಸಮಯ ಬೇಯಿಸಿ. – ಬೆಂದ ತರಕಾರಿಗಳ ಮಿಶ್ರಣಕ್ಕೆ ಕ್ಯಾಪ್ಸಿಕಮ್, ಅರಿಶಿನ, ಮೆಣಸಿನ ಪುಡಿ, ಜೀರಿಗೆಯನ್ನು ಸೇರಿಸಿ ಮಿಶ್ರಗೊಳಿಸಿ. ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಬೇಯಬೇಕು.
– ಬಳಿಕ ಕುಕ್ಕರ್ ನಲ್ಲಿ ಬೇಯಿಸಿಕೊಂಡ ಗೋಧಿ ನುಚ್ಚನ್ನು ತರಕಾರಿ ಮಿಶ್ರಣಕ್ಕೆ ಸೇರಿಸಿ.ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಬೆರೆತು ಉತ್ತಮ ರುಚಿ ನೀಡಲು ದೊಡ್ಡ ಉರಿಯಲ್ಲಿ ಸ್ವಲ್ಪ ಸಮಯಗಳ ಕಾಲ ಬೇಯಿಸಿ. ಬಳಿಕ ಉರಿಯನ್ನು ಆರಿಸಿ. ತರಕಾರಿ ಗೋಧಿ ನುಚ್ಚನ್ನು ಬಿಸಿ-ಬಿಸಿ ಇರುವಾಗಲೇ ಸವಿಯಲು ನೀಡಿ.