ಇಂದು ಎಲ್ಲರೂ ಆಹಾರ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್ನಲ್ಲಂತೂ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆದ್ಯತೆಯನ್ನು ನೀಡುತ್ತಿದ್ದಾರೆ. ಚಾಟ್ಸ್ ಐಟಮ್ಗಳಿರಬಹುದು, ಚೈನೀಸ್ ಫುಡ್ ಗಳಿರಬಹುದು, ತರೇವಾರಿ ನಾನ್ ವೆಜ್ ಐಟಮ್ಗಳಿರಬಹುದು ಹೀಗೆ ಜನರ ಫುಡ್ ಹ್ಯಾಬಿಟ್ ವಿಭಿನ್ನ ವಿಶಿಷ್ಟ. ಈ ಸಾಲಿಗೆ ಸೇರುವಂತದ್ದು ರೈಸ್ ಐಟಮ್ಗಳು. ಜೀರಾ ರೈಸ್, ಬಿರಿಯಾನಿ, ಫ್ರೈಡ್ ರೈಸ್,ಪಲಾವ್ ,ಪಾಲಕ್ ರೈಸ್, ಟೊಮೇಟೊ ರೈಸ್ ,ಲೆಮನ್ ರೈಸ್, ಪುದೀನಾ ರೈಸ್ ಹೀಗೆ ಈ ಪಟ್ಟಿ ಬೆಳೆಯುತ್ತದೆ.
ಹೀಗೆ ರೈಸ್ ಐಟಮ್ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವುದು “ಪಾಲಕ್ ರೈಸ್”.
ಆರೋಗ್ಯದ ದೃಷ್ಟಿಯಿಂದ ಹಣ್ಣು,ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹಳ ಮುಖ್ಯ. ಅದರಲ್ಲೂ ಪಾಲಕ್ ಸೊಪ್ಪು ಅತಿ ಹೆಚ್ಚು ಆರೋಗ್ಯಕ್ಕೆ ಉತ್ತಮ. ಕಬ್ಬಿಣಾಂಶ, ಕ್ಯಾಲ್ಸಿಯಂ,ಮೆಗ್ನೀಷಿಯಂ ಇತ್ಯಾದಿ ಹಲವಾರು ಉತ್ತಮ ಅಂಶಗಳನ್ನು ಹೊಂದಿರುವ ಪಾಲಕ್ ಸೊಪ್ಪನ್ನು ಉಪಯೋಗಿಸುವುದರಿಂದ ನಮ್ಮ ದೇಹದ ಬೆಳವಣಿಗೆಗೆ ಇದು ಬಹಳ ಸಹಕಾರಿಯಾಗಿದೆ.
ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾಗಿ ಪಾಲಕ್ ರೈಸ್ ಅನ್ನು ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ನೀವು ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು
ಪಾಲಕ್ ಸೊಪ್ಪು-1ಕಟ್ಟು, ತೆಂಗಿನ ತುರಿ-ಅರ್ಧ ಕಪ್, ಹಸಿಬಟಾಣಿ-50ಗ್ರಾಂ, ಬೆಳ್ತಿಗೆ ಅಕ್ಕಿ-2ಕಪ್, ಪುದೀನಾ ಸೊಪ್ಪು-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಹಸಿಮೆಣಸಿನ ಕಾಯಿ-8,ಈರುಳ್ಳಿ-2(ಸಣ್ಣ ಹೆಚ್ಚಿದ್ದು), ಟೊಮೇಟೊ-1(ಸಣ್ಣಗೆ ಹೆಚ್ಚಿದ್ದು), ತೆಂಗಿನೆಣ್ಣೆ-4ಚಮಚ, ತುಪ್ಪ-2ಚಮಚ,ಬೆಳ್ಳುಳ್ಳಿ-6ಎಸಳು, ಶುಂಠಿ-ಸ್ವಲ್ಪ, ಅರಿಶಿನ ಪುಡಿ-ಸ್ವಲ್ಪ, ಚಕ್ಕೆ, ಲವಂಗ, ಏಲಕ್ಕಿ(ಎರಡೆರಡು), ಕಸೂರಿ ಮೇಥಿ-ಸ್ವಲ್ಪ, ಸೋಂಪು ಕಾಳು-ಅರ್ಧ ಚಮಚ, ಲಿಂಬೆ ರಸ-1ಚಮಚ, ಗೋಡಂಬಿ,ಉಪ್ಪು-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
-ಮೊದಲಿಗೆ ಮಿಕ್ಸಿಗೆ ಜಾರಿಗೆ ತೆಂಗಿನ ತುರಿ, ಶುಂಠಿ, ಬೆಳ್ಳುಳ್ಳಿ, ಲವಂಗ, ಚಕ್ಕೆ, ಏಲಕ್ಕಿ ಮತ್ತು ಅರಿಶಿನ ಪುಡಿ ಇವೆಲ್ಲವನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
-ನಂತರ ಮತ್ತೊಮ್ಮೆ ಒಂದು ಮಿಕ್ಸಿಗೆ ಜಾರಿಗೆ ಪಾಲಕ್ ಸೊಪ್ಪು,ಹಸಿಮೆಣಸು,ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
-ಈಗ ಒಂದು ಕುಕ್ಕರ್ ಗೆ 4 ಚಮಚ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಮೇಲೆ ತುಪ್ಪ,ಲವಂಗ,ಏಲಕ್ಕಿ, ಚಕ್ಕೆ,ಸೋಂಪು ಮತ್ತು ಕಸೂರಿ ಮೇಥಿಯನ್ನು ಹಾಕಿಕೊಂಡು ಸ್ವಲ್ಪ ಫ್ರೈ ಮಾಡಿಕೊಳ್ಳಿ.
-ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ್ದ ಈರುಳ್ಳಿ, ಟೊಮೇಟೊ ಹಾಕಿ 2ರಿಂದ3 ನಿಮಿಷಗಳ ಕಾಲ ಫ್ರೈ ಮಾಡಿ ಆ ನಂತರ ರುಬ್ಬಿಟ್ಟ ತೆಂಗಿನ ಕಾಯಿ ಮಿಶ್ರಣವನ್ನು ಸೇರಿಸಿಕೊಂಡು ಹಸಿವಾಸನೆ ಹೋಗುವವರೆಗೆ ತಿರುವಿಕೊಳ್ಳಿ.
-ನಂತರ ಅದಕ್ಕೆ ನುಣ್ಣಗೆ ರುಬ್ಬಿಟ್ಟ ಪಾಲಕ್ ಸೊಪ್ಪಿನ ಪೇಸ್ಟ್ ಅನ್ನು ಹಾಕಿ 2 ರಿಂದ 3 ನಿಮಿಷಗಳವರೆಗೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
-ತದನಂತರ ಹಸಿಬಟಾಣಿಯನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಕಪ್ ನೀರನ್ನು ಹಾಕಿ ಬಳಿಕ ಇದಕ್ಕೆ ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಲಿಂಬೆರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
-ಎರಡು ಸೀಟಿವರೆಗೆ ಬೇಯಿಸಿದರೆ ಬಿಸಿ-ಬಿಸಿಯಾದ ಪಾಲಕ್ ರೈಸ್ ಸವಿಯಲು ಸಿದ್ಧ.(ಹುರಿದ ಗೋಡಂಬಿಯಿಂದ ಅಲಂಕರಿಸಿ)
-ಇದು ಸಲಾಡ್ ಜೊತೆ ತಿನ್ನಲು ಬಹಳ ರುಚಿಯಾಗುತ್ತದೆ.