ದೋಸೆ ಅಂದ್ರೆ ಸಾಕು ಯಾರಿಗೆ ಇಷ್ಟವಿಲ್ಲ ಹೇಳಿ. ಕೆಲವರಿಗೆ ಮಸಾಲಾ ದೋಸೆ ಇಷ್ಟವಾದರೆ ಇನ್ನು ಕೆಲವರಿಗೆ ಪ್ಲೇನ್, ಈರುಳ್ಳಿ ದೋಸೆ ಇಷ್ಟವಾಗುತ್ತದೆ. ಆದರೆ ಇಲ್ಲೊಂದು ದೋಸೆಯ ರೆಸಿಪಿ ಇದೆ ಇದು ಹತ್ತರಿಂದ ಹದಿನೈದು ನಿಮಿಷದಲ್ಲಿ ಮಾಡಬಹುದಾಗಿದೆ. ಮಾತ್ರವಲ್ಲದೇ ಇದು ಆರೋಗ್ಯಕ್ಕೂ ಒಳ್ಳೆಯದು ಅದುವೇ ಬೀಟ್ರೂಟ್ ನಿಂದ ಮಾಡುವ ದೋಸೆ. ಅಂದ ಹಾಗೆ ಬೀಟ್ರೂಟ್ ನಲ್ಲಿ ಪೋಷಕಾಂಶ, ವಿಟಮಿನ್, ಖನಿಜಾಂಶವಿರುವುದರಿಂದ ಈ ತರಕಾರಿಯನ್ನು ಆಹಾರದಲ್ಲಿ ಉಪಯೋಗಿಸುವುದರಿಂದ ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಹಾಗಾದರೆ ಮತ್ತೇಕೆ ತಡ “ಬೀಟ್ರೂಟ್ ದೋಸೆ“ ಹೇಗೆ ಮಾಡುವುದು ಎಂದು ತಿಳಿದುಕೊಳ್ಳಿ.
ಬೀಟ್ರೂಟ್ ದೋಸೆ ಬೇಕಾಗುವ ಸಾಮಗ್ರಿಗಳು
ಬಾಂಬೆ ರವೆ-ಅರ್ಧಕಪ್
ಅಕ್ಕಿಹಿಟ್ಟು-ಅರ್ಧಕಪ್
ಗೋಧಿ ಹಿಟ್ಟು-2 ಚಮಚ
ಅಚ್ಚಖಾರದ ಪುಡಿ-1ಚಮಚ
ಕಾಳುಮೆಣಸಿನ ಪುಡಿ-ಅರ್ಧಚಮಚ
ಜೀರಿಗೆ-ಅರ್ಧ ಚಮಚ
ಬೀಟ್ರೂಟ್-1
ಈರುಳ್ಳಿ-1
ತೆಂಗಿನ ತುರಿ-2ಚಮಚ
ಕೊತ್ತಂಬರಿ ಸೊಪ್ಪು-ಸ್ವಲ್ಪ
ಕರಿಬೇವು-ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಮೊದಲಿಗೆ ಒಂದು ಪಾತ್ರೆಗೆ ಬಾಂಬೈ ರವೆ, ಅಕ್ಕಿ ಹಿಟ್ಟು ಮತ್ತು ಗೋಧಿ ಹಿಟ್ಟು ಹಾಕಿ ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ,ತುರಿದಿಟ್ಟ ಬೀಟ್ರೂಟ್, ಅಚ್ಚಖಾರದ ಪುಡಿ, ಜೀರಿಗೆ, ಕಾಳುಮೆಣಸಿನ ಪುಡಿ, ತೆಂಗಿನ ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಎಲೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿರಿ.
ತದನಂತರ ಈ ಹಿಟ್ಟನ್ನು 5 ರಿಂದ 10ನಿಮಿಷಗಳ ಕಾಲ ಹಾಗೆ ಬಿಡಿ. ಆ ಬಳಿಕ ದೋಸೆ ಕಾವಲಿಗೆ ಎಣ್ಣೆಯನ್ನು ಸವರಿ ಮಾಡಿಟ್ಟ ಹಿಟ್ಟನ್ನು ಹಾಕಿ ದುಂಡನೆಯ ಆಕಾರಕ್ಕೆ ತನ್ನಿ.
ಬಳಿಕ ಎರಡು ಬದಿಯನ್ನು ಚೆನ್ನಾಗಿ ಗರಿ-ಗರಿಯಾಗುವವರೆಗೆ ಕಾಯಿಸಿದರೆ ಬೀಟ್ರೂಟ್ ದೋಸೆ ಸವಿಯಲು ಸಿದ್ಧ. ಇದು ಯಾವುದೇ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿಯಾಗುತ್ತದೆ.