ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ಆಘಾತ ನೀಡಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಹೊಸ ಹುಡ್ಯ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದ ಸರ್ವೆ ನಂಬರ್ 1 ಮತ್ತು 2ರಲ್ಲಿ 61.39 ಎಕರೆ ಒತ್ತುವರಿ ಆಗಿರುವ ಸಂಬಂಧ ಜಂಟಿ ಸಮೀಕ್ಷೆಯನ್ನು ಜನವರಿ 1ರಂದು ನಡೆಸಲೇಬೇಕು ಎಂದು ಅರಣ್ಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ತಾಕೀತು ಮಾಡಿದೆ.
ಶ್ರೀನಿವಾಸಪುರ ತಾಲ್ಲೂಕಿನ ಕುಂದಿಟಿವಾರಪಲ್ಲಿ ನಿವಾಸಿಯಾಗಿರುವ ವಕೀಲ ಕೆ ವಿ ಶಿವಾರೆಡ್ಡಿ ಜಂಟಿ ಸಮೀಕ್ಷೆಗೆ ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.
“ಈಗಾಗಲೇ ಹೈಕೋರ್ಟ್ ಈ ಮೊದಲು ನೀಡಿರುವ ಆದೇಶದ ಅನುಸಾರ ಜಿಲ್ಲಾಧಿಕಾರಿ, ಭೂ ದಾಖಲೆಗಳ ಉಪ ನಿರ್ದೇಶಕ ಮತ್ತು ಒತ್ತುವರಿ ಆರೋಪ ಎದುರಿಸುತ್ತಿರುವ ಮಾಜಿ ವಿಧಾನಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ಆಗಲೀ ಅಥವಾ ಅವರ ಅಧಿಕೃತ ಪ್ರತಿನಿಧಿಯಾಗಲೀ ಜಂಟಿ ಸರ್ವೆ ಕಾರ್ಯದಲ್ಲಿ ಭಾಗವಹಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ ರಮೇಶ್ ಕುಮಾರ್ ಅವರಿಗೆ ನೋಟಿಸ್ ಕೊಡಬೇಕು.
ಒಂದು ವೇಳೆ ರಮೇಶ್ ಕುಮಾರ್ ಆಗಲೀ ಅಥವಾ ಅವರ ಅಧಿಕೃತ ಪ್ರತಿನಿಧಿಯಾಗಲೀ ಸರ್ವೆ ಕಾರ್ಯದಲ್ಲಿ ಭಾಗವಹಿಸದೇ ಹೋದಲ್ಲಿ ಸರ್ವೇ ಕಾರ್ಯವನ್ನು ಮುಂದುವರಿಸಬೇಕು. ಅಂತೆಯೇ, ಸರ್ವೇ ನಡೆಸಿದ ನಂತರ ನೀಡಲಾಗುವ ವರದಿಯನ್ನು ಆಕ್ಷೇಪಿಸಲಾಗಲೀ ಅಥವಾ ಸ್ಥಿರಾಸ್ತಿ ಬಾಧ್ಯತೆಯ ಹಕ್ಕುಸಾಧಿಸಲಾಗಲಿ ರಮೇಶ್ ಕುಮಾರ್ ಅವರಿಗೆ ಯಾವುದೇ ಅಧಿಕಾರ ಇರುವುದಿಲ್ಲ.
“ಒತ್ತುವರಿ ಕುರಿತಂತೆ 14 ವರ್ಷದ ಹಿಂದೆಯೇ ಸರ್ವೇ ಕಾರ್ಯ ಕೈಗೊಳ್ಳಲು ಆದೇಶಿಸಲಾಗಿದ್ದರೂ ಅದನ್ನು ಇನ್ನೂ ಕಾರ್ಯಗತಗೊಳಿಸದೇ ಇರುವುದು ಆಘಾತಕಾರಿ ವಿಚಾ. ಸರ್ವೇ ಕಾರ್ಯದ ವರದಿಯನ್ನು ಜನವರಿ 30 ಅಥವಾ ಅಷ್ಟರೊಳಗೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು”
ಎಂದು ಅರಣ್ಯ ಉಪಸಂರಕ್ಷಣಾಧಿಕಾರಿಗೆ (ಡಿಸಿಎಫ್) ನಿರ್ದೇಶಿಸಿದೆ.