ADVERTISEMENT
ಸಿಎಂ ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆ ಇವತ್ತಿನಿಂದ ಜಾರಿಯಾಗಲಿದೆ.
ಜುಲೈ 27ರೊಳಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಆಗಸ್ಟ್ ತಿಂಗಳಲ್ಲಿ ಬರುವ ಜುಲೈ ವಿದ್ಯುತ್ ಬಳಕೆಯ ಬಿಲ್ನಲ್ಲಿ ಶೂನ್ಯ ಶುಲ್ಕ ಅಥವಾ ಝೀರೋ ಬಿಲ್ ಬರಲಿದೆ. ಅಂದರೆ ಈ ತಿಂಗಳು ಮೀಟರ್ ರೀಡಿಂಗ್ ವೇಳೆ ಕೊಡುವ ಬಿಲ್ಗೆ ಶುಲ್ಕ ಪಾವತಿಸಬೇಕಿಲ್ಲ.
ರಾಜ್ಯ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 1 ಕೋಟಿ 42 ಲಕ್ಷ ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿವೆ.
ಜುಲೈ 27ರೊಳಗೆ ಅರ್ಜಿ ಸಲ್ಲಿಸಿರುವ ಕುಟುಂಬಗಳಿಗೆ ಜುಲೈ ತಿಂಗಳ ವಿದ್ಯುತ್ ಬಿಲ್ನಲ್ಲಿ ಶೂನ್ಯ ಶುಲ್ಕ ಇರಲಿದೆ.
ಆದರೆ ಅರ್ಜಿ ಸಲ್ಲಿಕೆಗೆ ಯಾವುದೇ ಗಡುವು ಇರಲ್ಲ. ಅಂದರೆ ಜುಲೈ 28ರ ಬಳಿಕ ಸಲ್ಲಿಕೆ ಮಾಡಿದ ಗ್ರಾಹಕರಿಗೆ ಆಗಸ್ಟ್ ತಿಂಗಳಲ್ಲಿ ಬಳಕೆ ಮಾಡುವ ಆದರೆ ಸೆಪ್ಟೆಂಬರ್ನಲ್ಲಿ ಸಿಗುವ ಬಿಲ್ನಲ್ಲಿ ವಿನಾಯಿತಿ ಸಿಗಲಿದೆ.
ಆಗಸ್ಟ್ 5ರಂದು ಕೈಗೆ ಸಿಗುವ ವಿದ್ಯುತ್ ಬಿಲ್ನಲ್ಲಿ ಗೃಹ ಜ್ಯೋತಿ ಯೋಜನೆಯಡಿ ಶೂನ್ಯ ಮೊತ್ತ ಇರಲಿದೆ. ಕಲಬುರಗಿಯಲ್ಲಿ ಆಗಸ್ಟ್ 5ರಂದು ನಡೆಯುವ ಕಾರ್ಯಕ್ರಮದಲ್ಲಿ ಗೃಹಜ್ಯೋತಿಗೆ ಚಾಲನೆ ಸಿಗಲಿದೆ.
ಮೂರು ಮಾನದಂಡ:
ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಮೂರು ಮಾನದಂಡಗಳನ್ನು ರಾಜ್ಯ ಸರ್ಕಾರ ಅಳವಡಿಸಿದೆ.
ಮಾನದಂಡ 1: ಒಂದು ವರ್ಷದ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆಯ ಜೊತೆಗೆ ಶೇಕಡಾ 10ರಷ್ಟು ಹೆಚ್ಚುವರಿ ವಿದ್ಯುತ್ ಬಳಕೆ ಮಾಡುವ ಕುಟುಂಬಗಳಿಗೆ ಗೃಹ ಜ್ಯೋತಿ ಯೋಜನೆಯಡಿ ಶೂನ್ಯ ಶುಲ್ಕ (Zero Bill) ಇರಲಿದೆ.
ಉದಾಹರಣೆಗೆ: ಒಂದು ಕುಟುಂಬ ವಾರ್ಷಿಕ 50 ಯುನಿಟ್ ವಿದ್ಯುತ್ ಬಳಸ್ತಿದ್ದರೆ ಆಗ 50 ಯುನಿಟ್ ಜೊತೆಗೆ ಹೆಚ್ಚುವರಿ 5 ಯುನಿಟ್ ಅಂದರೆ 55 ಯುನಿಟ್ ವಿದ್ಯುತ್ ಬಳಕೆಗೆ ಅವಕಾಶ ಇರಲಿದೆ. ಈ ಮಿತಿಯೊಳಗೆ ವಿದ್ಯುತ್ ಬಳಕೆಯಿದ್ದರೆ ಆಗ Zero Bill ಸಿಗಲಿದೆ.
ಮಾನದಂಡ 2: ಒಂದು ವರ್ಷದ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆಯ ಜೊತೆಗೆ ಶೇಕಡಾ 10ರಷ್ಟು ಹೆಚ್ಚುವರಿ ವಿದ್ಯುತ್ ಬಳಕೆಯನ್ನೂ ಮೀರಿದರೆ ಆಗ ಆ ಮಿತಿಯನ್ನು ಮೀರಿದ ವಿದ್ಯುತ್ ಬಳಕೆಗಷ್ಟೇ ಶುಲ್ಕ ಪಾವತಿಸಬೇಕಾಗುತ್ತದೆ.
ಆದರೆ ಈ ಮಾನದಂಡ ಪ್ರಕಾರ ನಿಗದಿತ ಶುಲ್ಕ ಮತ್ತು ಇಂಧನ ಹೊಂದಾಣಿಕೆ ಶುಲ್ಕ ಪಾವತಿಸಬೇಕಾಗುತ್ತದೆ.
ಉದಾಹರಣೆಗೆ: ಒಂದು ಕುಟುಂಬ ವಾರ್ಷಿಕ 50 ಯುನಿಟ್ ವಿದ್ಯುತ್ ಬಳಸ್ತಿದ್ದರೆ ಆಗ 50 ಯುನಿಟ್ ಜೊತೆಗೆ ಹೆಚ್ಚುವರಿ 5 ಯುನಿಟ್ ಅಂದರೆ 55 ಯುನಿಟ್ ವಿದ್ಯುತ್ ಬಳಕೆಗೆ ಅವಕಾಶ ಇರಲಿದೆ. ಒಂದು ವೇಳೆ 55 ಯುನಿಟ್ನ ಮಿತಿ ಬದಲು 65 ಯುನಿಟ್ ಬಳಸಿದರೆ ಆಗ 65-55 = 10 ಯುನಿಟ್ ಅಂದರೆ ಮಿತಿಯನ್ನು ಮೀರಿ ಬಳಸಿದ 10 ಯುನಿಟ್ಗಷ್ಟೇ ವಿದ್ಯುತ್ ಶುಲ್ಕ ಪಾವತಿಸಬೇಕಾಗುತ್ತದೆ.
ಆದರೆ ಈ 10 ಯುನಿಟ್ ಮೊತ್ತದ ಜೊತೆಗೆ ನಿಗದಿತ ಶುಲ್ಕ, ಇಂಧನ ಹೊಂದಾಣಿಕೆ ಶುಲ್ಕ ಮತ್ತು 10 ಯುನಿಟ್ ಮೇಲೆ ವಿಧಿಸಲಾಗುವ ಶೇಕಡಾ 9ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಮಾನದಂಡ 3: ಈ ಮಾನದಂಡ ಪ್ರಕಾರ ಒಂದು ವೇಳೆ ವಿದ್ಯುತ್ ಬಳಕೆ 200 ಯುನಿಟ್ ಮೀರಿದರೆ ಆಗ ಆ ಕುಟುಂಬ ತಾವು ಬಳಸಿದ ಸಂಪೂರ್ಣ ವಿದ್ಯುತ್ಗೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ಕುಟುಂಬಕ್ಕೆ ಯಾವುದೇ ರಿಯಾಯಿತಿ ಸಿಗಲ್ಲ.
ADVERTISEMENT