ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವ ಸಲುವಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ರಾಜ್ಯಾದ್ಯಂತ ಕಾರ್ಖಾನೆಗಳಲ್ಲಿ ಯಾವುದೇ ಮಹಿಳಾ ಕಾರ್ಮಿಕರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಕಂಪೆನಿಯೊಂದಿಗೆ ಬದ್ಧರಾಗಿರುವುದಿಲ್ಲ ಎಂದು ಆದೇಶ ಹೊರಡಿಸಿದೆ.
ಯಾವುದೇ ಮಹಿಳಾ ಕಾರ್ಮಿಕರು ಬೆಳಿಗ್ಗೆ 6 ಗಂಟೆಯ ಮೊದಲು ಮತ್ತು ಸಂಜೆ 7 ರ ನಂತರ ಅವರ ಲಿಖಿತ ಒಪ್ಪಿಗೆಯಿಲ್ಲದೆ ಕೆಲಸ ಮಾಡಲು ಬದ್ಧರಾಗಿರುವುದಿಲ್ಲ. ಹಾಗೇನಾದರೂ ಈ ಸಮಯದಲ್ಲಿ ಮಹಿಳೆಯರು ಲಿಖಿತ ಒಪ್ಪಿಗೆ ನೀಡಿ ಕೆಲಸಕ್ಕೆ ಹಾಜರಾಗಿದ್ದಲ್ಲಿ ಈ ಮಹಿಳೆಯರಿಗೆ ಅಧಿಕಾರಿಗಳು ಉಚಿತ ಸಾರಿಗೆ, ಆಹಾರ ನೀಡಬೇಕು. ಹಾಗೆಯೇ ಮಹಿಳೆಯರ ಮೇಲ್ವಿಚಾರಣೆಯನ್ನು ಮಾಡುತ್ತಿರಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಆದೇಶದ ಪ್ರಕಾರ, ಮಹಿಳಾ ಕಾರ್ಮಿಕರು ಬೆಳಿಗ್ಗೆ 6 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಕೆಲಸ ಮಾಡಲು ನಿರಾಕರಿಸಿದರೆ, ಅವರನ್ನು ಉದ್ಯೋಗದಿಂದ ವಜಾಗೊಳಿಸುವಂತಿಲ್ಲ. ರಾಜ್ಯದ ಎಲ್ಲಾ ಮಿಲ್ಗಳು ಮತ್ತು ಕಾರ್ಖಾನೆಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ವಿನಾಯಿತಿಗಳನ್ನು ನೀಡಲು ಸರ್ಕಾರ ಸೂಚಿಸಿದೆ. ಉತ್ತರ ಪ್ರದೇಶದ ಕಾರ್ಮಿಕ ಇಲಾಖೆ ಈ ಆದೇಶವನ್ನು ಹೊರಡಿಸಿದೆ.
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಘಟನೆಯನ್ನು ತಡೆಗಟ್ಟಲು ಮಹಿಳಾ ಕಾರ್ಮಿಕರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸುವ ಜವಾಬ್ದಾರಿಯು ಉದ್ಯೋಗದಾತರ ಮೇಲಿರುತ್ತದೆ. ಮಾಲೀಕರು ಕಾರ್ಖಾನೆಯಲ್ಲಿ ದೂರು ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಉತ್ತರ ಪ್ರದೇಶದ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.