ರಂಜಾನ್ ಹಬ್ಬದ ಆಚರಣೆಯ ನಡುವಲ್ಲೇ ಜೋಧ್ಪುರದಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿದೆ ಎಂದು ತಿಳಿದುಬಂದಿದೆ.
ಜೋಧ್ಪುರದಲ್ಲಿ ಮೂರು ದಿನಗಳ ಪರಶುರಾಮ ಜಯಂತಿ ಉತ್ಸವವೂ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಎರಡೂ ಸಮುದಾಯಗಳು ತಮ್ಮ ಧಾರ್ಮಿಕ ಧ್ವಜಗಳನ್ನು ಹಾಕಿಕೊಂಡಿವೆ. ಈ ವಿಚಾರ ಘರ್ಷಣೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಒಂದು ಸಮುದಾಯದ ಕೆಲವು ದುಷ್ಕರ್ಮಿಗಳು ಈದ್ಗೆ ಮುನ್ನ ಬಲ್ಮುಕಂದ್ ಬಿಸ್ಸಾ ವೃತ್ತದಲ್ಲಿ ಕೇಸರಿ ಧ್ವಜವನ್ನು ತೆಗೆದು ಇಸ್ಲಾಮಿಕ್ ಧ್ವಜವನ್ನು ಹಾಕಿದ್ದಾರೆ. ಇದರಿಂದ ಹಿಂದೂ ಸಂಘಟನೆಯ ಯುವಕರೂ ಪ್ರಶ್ನೆಸಲು ಮುಂದಾಗಿದ್ದಾರೆ. ವಾದ ವಿಕೋಪಕ್ಕೆ ತಿರುಗಿ ಜಲೋರಿ ಗೇಟ್ ಛೇದಕದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.
ಎರಡು ಸಮುದಾಯಗಳ ನಡುವಿನ ವಾದ-ವಿವಾದಗಳು ಹಿಂಸಾಚಾರಕ್ಕೆ ತಿರುಗಿ ಕಲ್ಲು ತೂರಾಟವೂ ನಡೆದಿದೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದೀಗ ನಗರದಲ್ಲಿಬಿಗುವಿನ ವಾತಾವರಣ ಮುಂದುವರೆದಿದ್ದು, ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಜೋಧ್ಪುರ ವಿಭಾಗೀಯ ಆಯುಕ್ತ ಹಿಮಾಂಶು ಗುಪ್ತಾ ಹೊರಡಿಸಿದ ಆದೇಶದಲ್ಲಿ, ಇಡೀ ಜೋಧ್ಪುರ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.