ಸರ್ಕಾರ ಮಠಗಳಿಗೆ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇಕಡಾ 30ರಷ್ಟು ಲಂಚ ನೀಡಬೇಕಿದೆ. ಭ್ರಷ್ಟಾಚಾರ ಇಲ್ಲಿಗೆ ಬಂದು ನಿಂತಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆಪಾದನೆ ಮಾಡಿದ್ದಾರೆ.
ಈ ಮೂಲಕ ಲಂಚ ಆರೋಪದಡಿ ಸಚಿವ ಈಶ್ವರಪ್ಪ ರಾಜೀನಾಮೆ ಮತ್ತು ಬಿಜೆಪಿ ಸಚಿವರ ವಿರುದ್ಧ ಕೇಳಿಬಂದಿರುವ ಸಾಲು ಸಾಲು ಹಗರಣಗಳ ಆರೋಪದ ನಡುವೆಯೇ ಬಿಜೆಪಿ ರಾಜ್ಯದಲ್ಲಿ ಮತ್ತೊಂದು ಮುಜುಗರಕ್ಕೆ ಸಿಲುಕಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ ಕೃಷ್ಣ-ಮಹದಾಯಿ-ನವಲಿ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಅವರು, `
`ಮಠಗಳಿಗೆ ಬಿಡುಗಡೆ ಆದ ಅನುದಾನದಲ್ಲಿ ಕಮಿಷನ್ ಕಡಿತ ಆದ ನಂತರವೇ ಕಟ್ಟಡದ ಕೆಲಸ ಆರಂಭ ಆಗುತ್ತದೆ. ಇಲ್ಲದಿದ್ದರೆ ಆಗಲ್ಲ. ಈ ಅಧಿಕಾರಿಗಳು ನಮಗೆ ಹೇಳುತ್ತಾರೆ, ಇಷ್ಟು ರೊಕ್ಕ ಕಡಿತ ಮಾಡದಿದ್ದರೆ ನಿಮ್ಮ ಕೆಲಸವಂತೂ ಆಗಲ್ಲ ಎನ್ನುತ್ತಾರೆ. ಈಗಂತು ನಾಡಿನಲ್ಲಿ ಬುದ್ಧಿಗೇಡಿ ಸರ್ಕಾರಗಳು ಬರುತ್ತಿವೆ‘ ಎಂದು ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ ಮಠಗಳಿಗೆ 600 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು.
`ಒಂದು ವರ್ಷ ಉತ್ತರ ಭಾರತದಲ್ಲಿ ಸಾವು-ನೋವಿಗೂ ಅಂಜದೇ ರೈತರು ನಡೆಸಿದ ಹೋರಾಟದ ಮಾದರಿಯ ಪ್ರತಿರೋಧಕ್ಕೆ ಇಲ್ಲಿಯ ರೈತರು ಸಿದ್ಧರಾದರೇ ಮಾತ್ರ ನಿಮಗೆ ಅನ್ನ ಸಿಕ್ಕಿತು, ಇಲ್ಲವಾದ್ರೆ ಏನೂ ಸಿಗಲ್ಲ’ ಎಂದು ರೈತರಿಗೆ ಸ್ವಾಮೀಜಿ ಬುದ್ಧಿಮಾತು ಹೇಳಿದರು.