ಹುಬ್ಬಳ್ಳಿಯ ಅಕ್ಷಯ ಕಾಲೋನಿಯ ಮನೆಯೊಂದರಲ್ಲಿ ಶುಕ್ರವಾರ ರಾತ್ರಿ ಇಸ್ಪೀಟ್ ಜೂಜಾಟವಾಡಿದ್ದ ಪ್ರಕರಣದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಸಿಎಆರ್ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ (ಆರ್ಪಿಐ) ಸಂತೋಷ್ ಬೋಜಪ್ಪಗೋಳ, ಸಿಎಆರ್ ಹೆಡ್ಕಾನ್ಸ್ಟೇಬಲ್ಗಳಾದ ಮುತ್ತಪ್ಪ ಕಾಟನಾಯಕ, ನವೀನ ತೋಪಲಕಟ್ಟಿ, ಪೂರ್ವ ಸಂಚಾರ ಠಾಣೆಯ ಕಾನ್ಸ್ಟೇಬಲ್ ಬಸವಣ್ಯಪ್ಪ ಬಾವಿಹಾಳ ಹಾಗೂ ಸಿಎಆರ್ನ ನಿವೃತ್ತ ಹೆಡ್ಕಾನ್ಸ್ಟೇಬಲ್ ಶ್ರೀಕಾಂತ ಗೋಂದಕರ್ ಅಮಾನತಾದ ಪೊಲೀಸರು. ಇವರನ್ನು ಅಮಾನತುಗೊಳಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಆದೇಶ ಹೊರಡಿಸಿದ್ದಾರೆ.
ಅಕ್ಷಯ ಕಾಲೋನಿಯ ಎರಡನೇ ಹಂತದ 337 ಸಂಖ್ಯೆಯ ಬಾಡಿಗೆ ಮನೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಇಸ್ಪೀಟ್ ಆಟವಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸ್ ಆಯುಕ್ತರ ಸೂಚನೆಯಂತೆ ಗೋಕುಲ ರೋಡ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ದಾಳಿ ನಡೆಸಿತ್ತು. ದಾಳಿ ವೇಳೆ ಐವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.