ಹೈದರಾಬಾದ್’ನ ಜುಬಿಲಿ– ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಶಾಸಕನ ಪುತ್ರ ಸೇರಿ ಎಲ್ಲಾ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ 6 ಮಂದಿಯ ಪೈಕಿ ನಾಲ್ವರು ಬಾಲಾರೋಪಿಗಳಾಗಿದ್ದು, ಮತ್ತೊಬ್ಬ ವಯಸ್ಕ ಆರೋಪಿಯನ್ನು ಸದುದ್ದೀನ್ ಮಲಿಕ್ (18 ವರ್ಷ) ಎಂದು ಗುರ್ತಿಸಲಾಗಿದೆ. ಪ್ರಕರಣದ ಆರನೇ ಬಾಲಾರೋಪಿಯಾಗಿ ಎಐಎಂಐಎಂ ಶಾಸಕನ ಪುತ್ರನನ್ನು ಹೆಸರಿಸಲಾಗಿದ್ದು, ಆತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದುದ್ದೀನ್ ಮಲಿಕ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ), 323 (ಆಘಾತ ಉಂಟುಮಾಡಲು ಕಾರಣರಾಗುವುದು), 366 (ಅಪಹರಣ) ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ವಿಡಿಯೊ ಚಿತ್ರೀಕರಣ ಮಾಡಿದ ಆರೋಪದಲ್ಲಿ ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಅವರು, ಶಾಸಕರ ಪುತ್ರ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ, ಆದರೆ ಇನ್ನೋವಾದಲ್ಲಿ ಅಪರಾಧ ನಡೆಯುವುದಕ್ಕೂ ಮೊದಲು, ಶಾಸನನ ಪುತ್ರ ಕಾರಿನಲ್ಲಿ ಸಂತ್ರಸ್ತೆಯ ಜೊತೆಯಲ್ಲಿದ್ದಾಗ ಕಿರುಕುಳ ನೀಡಿದ್ದಾನೆ. ನಂತರ ಆತನ ಜೊತೆಗಿದ್ದ ಮೂವರು ಸ್ನೇಹಿತರು ಆಕೆಗೆ ಕಿರುಕುಳ ನೀಡಿದ್ದಾರೆ. ಬಾಲಕಿಯ ಕುತ್ತಿಗೆ ಹಾಗೂ ದೇಹದ ಇತರೆ ಭಾಗಗಳಲ್ಲಿ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ಪಾರ್ಟಿಯ ದಿನ ಹುಡುಗಿ ತನ್ನ ಸ್ನೇಹಿತೆಯೊಂದಿಗೆ ಪಬ್’ಗೆ ಹೋಗಿದ್ದಾಳೆ. ಬಾಲಕಿ ಕ್ಯಾಬ್ ನಲ್ಲಿ ಒಬ್ಬಂಟಿಯಾಗಿ ಹೋಗುವುದನ್ನು ನೋಡಿದ ಆರೋಪಿಗಳು ಆಕೆಯನ್ನು ತಮ್ಮ ಕಾರಿಗೆ ಹತ್ತಿಸಿಕೊಂಡು ಒಬ್ಬರಾದ ಬಳಿಕ ಒಬ್ಬರಂತೆ ಆಕೆಗೆ ಕಿರುಕುಳ ನೀಡಿದ್ದಾರೆ. ಬಳಿಕ ಜುಬಿಲಿ ಹಿಲ್ಸ್ನ ರೋಡ್ ನಂ 44 ರಲ್ಲಿನ ನಿರ್ಜನ ಪ್ರದೇಶವೊಂದಕ್ಕೆ ಕಾರನ್ನು ತೆಗೆದುಕೊಂಡ ಬಂದ ಆರೋಪಿಗಳು ಒಬ್ಬರ ನಂತರ ಒಬ್ಬರಂತೆ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾರೆ.