ADVERTISEMENT
ಆದಾಯ ತೆರಿಗೆ ಕಟ್ಟುವಂತೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.
ದೇವಸ್ಥಾನದ ಈ ಹಿಂದಿನ ವ್ಯವಹಾರಗಳಿಗೆ 1 ಕೋಟಿ 38 ಲಕ್ಷದ 20 ಸಾವಿರದ 160 ರೂಪಾಯಿ ತೆರಿಗೆ ಕಟ್ಟುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.
ಆದಾಯ ತೆರಿಗೆ ಇಲಾಖೆಯ ನೋಟಿಸ್ನ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೂ ಮೊದಲು ದೇವಸ್ಥಾನದ ಆಡಳಿತ ಮಂಡಳಿ ಶೇಕಡಾ 20ರಷ್ಟು ಮೊತ್ತವನ್ನು ಅಂದರೆ 27 ಲಕ್ಷದ 65 ಸಾವಿರ ರೂಪಾಯಿಯನ್ನು ಕಟ್ಟಬೇಕಾಗುತ್ತದೆ.
ದೇವಸ್ಥಾನದ ಮೇಲ್ವಿಚಾರಣೆಗೆ ಸುಪ್ರೀಂಕೋರ್ಟ್ನಿಂದ ನೇಮಕವಾಗಿರುವ ನಿವೃತ್ತ ನ್ಯಾಯಮೂರ್ತಿ ಬಿ ಎನ್ ಕೃಷ್ಣ ನೇತೃತ್ವದ ಮೇಲ್ವಿಚಾರಣಾ ಸಮಿತಿ 2008ರಿಂದ ದೇವಸ್ಥಾನದ ವ್ಯವಹಾರಕ್ಕೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆಗೆ ಮತ್ತು ನೋಟಿಸ್ನ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದೆ.
2008ರಲ್ಲಿ ಆಗಿನ ಯಡಿಯೂರಪ್ಪ ಅವರ ಸರ್ಕಾರ ಗೋಕರ್ಣ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಹೊರಗಿಟ್ಟು ದೇವಸ್ಥಾನವನ್ನು ರಾಮಚಂದ್ರಪುರ ಮಠಕ್ಕೆ ಕೊಟ್ಟಿತ್ತು. 2018ರಲ್ಲಿ ಸಿದ್ದರಾಮಯ್ಯನವರ ಸರ್ಕಾರ ಬಿಜೆಪಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿ ದೇವಸ್ಥಾನವನ್ನು ಮತ್ತೆ ಮುಜರಾಯಿ ವ್ಯಾಪ್ತಿಗೆ ತೆಗೆದುಕೊಳ್ತು.
ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ಗೆ ರಾಮಚಂದ್ರಪುರ ಮಠ ಮೇಲ್ಮನವಿ ಸಲ್ಲಿಸಿತ್ತು. ಆದ್ರೆ ಮಠದ ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಮಠ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
2021ರಲ್ಲಿ ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಎನ್ ಕೃಷ್ಣ ನೇತೃತ್ವದ ಮೇಲ್ವಿಚಾರಣಾ ಸಮಿತಿ ರಚಿಸಿ ತ್ರಿಸದಸ್ಯ ಪೀಠ ಆದೇಶ ನೀಡಿತ್ತು.
ADVERTISEMENT