ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಎನ್ನುವ ಮಾತಿದೆ, ಶಾಸಕಾಂಗ, ಕಾರ್ಯಾಂಗವನ್ನು ಖರೀದಿಸಿ ಭ್ರಷ್ಟಗೊಳಿಸಿದಂತೆ ಮಾಧ್ಯಮಗಳನ್ನೂ ಖರೀದಿಸಲು ಬಿಜೆಪಿ ವಿಫಲ ಯತ್ನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿ ಸರಣಿ ಟ್ವೀಟ್ ಮಾಡಿದೆ.
ಪೆಸಿಎಂ ಬಸವರಾಜ್ ಬೊಮ್ಮಾಯಿ ಅವರೇ, ನಿಮ್ಮ 40 ಪರ್ಸೆಂಟ್ ಸರ್ಕಾರ ಭ್ರಷ್ಟಾಚಾರದ ತುತ್ತತುದಿಗೆ ತಲುಪಿರುವುದರಲ್ಲಿ ಇನ್ಯಾವ ಅನುಮಾನವೂ ಉಳಿದಿಲ್ಲ. ಸಿಎಂ ಕಚೇರಿಯ ‘ಸ್ವೀಟ್ ಬಾಕ್ಸ್ ಲಂಚ’ದ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಲೋಕಾಯುಕ್ತ ತನಿಖೆಗೆ ಸಹಕರಿಸುವಿರಾ? ಹಣದ ಮೂಲ ಹೇಳುವಿರಾ? ಯಾವ್ಯಾವ ಪತ್ರಕರ್ತರಿಗೆ ಎಷ್ಟೆಷ್ಟು ಗಿಫ್ಟ್ ನೀಡಿದಿರಿ ಎಂಬ ಲೆಕ್ಕ ನೀಡುವಿರಾ? ಯಾರು ಪಡೆದರು, ಯಾರು ವಾಪಸ್ ನೀಡಿದರು ಎಂಬ ಮಾಹಿತಿ ನೀಡುವಿರಾ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಸಚಿವ ಸುಧಾಕರ್ ಪತ್ರಕರ್ತರಿಗೆ ಉಡುಗೊರೆ ರೂಪದ ಲಂಚ ನೀಡಿರುವ ಸುದ್ದಿ ಹೊರಬಂದಿದೆ. ಸಿಎಂ ಕಛೇರಿಯದ್ದು ಹಣವಾದರೆ, ಇವರದ್ದು ಸ್ಕಾಚ್, ವಾಚ್, ಗೋಲ್ಡ್ ಕಾಯಿನ್! ಇವುಗಳನ್ನು ಕೋವಿಡ್ ಖರೀದಿ ಹಗರಣದಲ್ಲಿ ಲೂಟಿ ಮಾಡಿದ ಹಣದಲ್ಲಿ ನೀಡಿದ್ದೇ.. ಬಿಜೆಪಿ ಉತ್ತರಿಸಬೇಕು.. 40 ಪರ್ಸೆಂಟ್ ಸರ್ಕಾರ ದ ಅಕ್ರಮಗಳನ್ನು ಮುಚ್ಚಿ ಹಾಕಲು ಈ ಗಿಫ್ಟ್ ಲಂಚವೇ? ಎಂದು ಕೇಳಿದೆ.
ಎಲ್ಲವನ್ನೂ ಹಣದಿಂದ ಖರೀದಿಸುತ್ತೇವೆ ಎಂಬ ಧಿಮಾಕು ಬಿಜೆಪಿಗೆ ಬಂದಿರುವುದು ಭ್ರಷ್ಟಾಚಾರದಿಂದ. ಆದರೇ,
ಸರ್ಕಾರದ ಲಂಚದ ಬಾಕ್ಸ್ ಬೇಡ, ನಮ್ಮ ಲಂಚ್ ಬಾಕ್ಸ್ ಅಷ್ಟೇ ಸಾಕು ಎನ್ನುವ ಪ್ರಾಮಾಣಿಕ ಪತ್ರಕರ್ತರಿಂದ ಸರ್ಕಾರದ ಮಹಾ ಅಕ್ರಮ ಹೊರಬಿದ್ದಿದೆ ಎಂದು ಕಾಂಗ್ರೆಸ್ ಹೇಳಿದೆ.
ಈ ಸ್ವೀಟ್ ಬಾಕ್ಸ್ ಲಂಚದ ಕುರಿತಾಗಿ ಪ್ರತಿಕ್ರಿಯಿಸಲು ಬಿಜೆಪಿಯ ಯಾವ ನಾಯಕರು ಕೂಡ ಸಿದ್ದರಿಲ್ಲ.