ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra) ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಲಾಸನ್ನಲ್ಲಿ ನಡೆದ ‘ಡೈಮಂಡ್ ಲೀಗ್’ನಲ್ಲಿ ಅಗ್ರಸ್ಥಾನ ಪಡೆದು ಕೊಂಡಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ದಾಖಲೆ ಬರೆದಿದ್ದಾರೆ.
ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ನೀರಜ್ 89.04 ಮೀ. ಸಾಧನೆಯೊಂದಿಗೆ ಮೊದಲ ಸ್ಥಾನ ಪಡೆದರು. ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ನೀರಜ್ (Neeraj Chopra) ಪಾತ್ರರಾಗಿದ್ದಾರೆ. ಈ ಜಯದೊಂದಿಗೆ ಮುಂದಿನ ತಿಂಗಳು ಜ್ಯೂರಿಚ್ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್ಗೆ ನೀರಜ್ ಅರ್ಹತೆ ಪಡೆದಿದ್ದಾರೆ.
ಇದನ್ನೂ ಓದಿ : ‘ಗೋಲ್ಡನ್ ಬಾಯ್’ ನೀರಜ್ ಚೋಪ್ರಾ ಹೆಸರಲ್ಲಿ ಮಾರುಕಟ್ಟೆಗೆ ಬಂದ ಜೆರ್ಸಿ, ನೀರಿನ ಬಾಟಲಿ!
ಮೊದಲ ಪ್ರಯತ್ನದಲ್ಲೇ ನೀರಜ್ ಈ ಸಾಧನೆ ಮಾಡಿದ್ದು ವಿಶೇಷ. ಜೇಕಬ್ ವಾಡ್ಲೆಚ್ (85.88 ಮೀ.) ಎರಡನೇ ಸ್ಥಾನ ಪಡೆದರೆ, ಅಮೆರಿಕದ ಕರ್ಟಿಸ್ ಥಾಂಪ್ಸನ್ (83.72 ಮೀ.) ಮೂರನೇ ಸ್ಥಾನ ಗಳಿಸಿದರು. ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ಬಳಿಕ ಇವರು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕಾಮನ್ವೆಲ್ತ್ ಗೇಮ್ಸ್ನಿಂದ ಕೂಡ ಹೊರಗುಳಿಯ ಬೇಕಾಯಿತು. ಇದೀಗ ಸ್ವಿಸ್ನ ಡೈಮಂಡ್ ಲೀಗ್ನಲ್ಲಿ 89.08 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಪ್ರಶಸ್ತಿ ಜಯಿಸಿಕೊಂಡಿದ್ದಾರೆ.
ಈ ಗೆಲುವಿನೊಂದಿಗೆ ನೀರಜ್ ಚೋಪ್ರಾ ಸೆಪ್ಟೆಂಬರ್ 7 ಮತ್ತು 8 ರಂದು ಸ್ವಿಟ್ಜರ್ಲೆಂಡ್ನ ಜ್ಯೂರಿಚ್ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, 2023 ರ ವಿಶ್ವ ಚಾಂಪಿಯನ್ಶಿಪ್ಗೆ ನೀರಜ್ ಅರ್ಹತೆ ಪಡೆದಿದ್ದಾರೆ.