ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಅಂತಿಮ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರ ಜನವರಿ 30 ರಂದು ಸರ್ವಪಕ್ಷಗಳ ಸಭೆ ಕರೆದಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಜನವರಿ 30 ರಂದು ಮಧ್ಯಾಹ್ನ ಸಂಸತ್ತಿನ ಆವರಣದಲ್ಲಿ ಸಭೆ ನಡೆಯಲಿದೆ.
ಈ ಬಾರಿ ಚುನಾವಣಾ ವರ್ಷವಾಗಿರುವ ಕಾರಣ ಜನವರಿ 31 ರಿಂದ ಫೆಬ್ರವರಿ 9 ರವರೆಗೆ ಸಣ್ಣ ಅಧಿವೇಶ ನಡೆಯಲಿದೆ. ಈ ಸಂದರ್ಭ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಚುನಾವಣೆ ಬಳಿಕ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತದೆ.
ಜನವರಿ 31 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಆರಂಭಿಸುವ ಮೂಲಕ ಅಧಿವೇಶನಕ್ಕೆ ಚಾಲನೆ ಸಿಗಲಿದೆ. ಫೆಬ್ರವರಿ 1ರಂದು ಬಜೆಟ್ ಮಂಡನೆಯಾಗಲಿದೆ.