ADVERTISEMENT
ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಶೇಕಡಾ 25ರಷ್ಟು ಸರ್ಕಾರಿ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿವೆ. ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ವರದಿಯಲ್ಲಿ ಮಾಹಿತಿ ಬಹಿರಂಗವಾಗಿದೆ.
2014ರಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕಾಲಕ್ಕೆ ಹೋಲಿಸಿದರೆ ಕಳೆದ ವರ್ಷದ ಮಾರ್ಚ್ವರೆಗೆ ಖಾಲಿ ಇರುವ ಕೇಂದ್ರ ಸರ್ಕಾರಿ ಹುದ್ದೆಗಳ ಪ್ರಮಾಣ 2 ಪಟ್ಟು ಹೆಚ್ಚಳವಾಗಿದೆ.
2002ರ ಮಾರ್ಚ್ವರೆಗೆ (UPA ಸರ್ಕಾರ ಇತ್ತು) ಖಾಲಿ ಇದ್ದ ಹುದ್ದೆಗಳ ಪ್ರಮಾಣ ಶೇಕಡಾ 9.4ರಷ್ಟಿತ್ತು. 2014ರ ಮಾರ್ಚ್ ವೇಳೆಗೆ ಅದು ಶೇಕಡಾ 12ಕ್ಕೆ ಹೆಚ್ಚಳವಾಗಿತ್ತು. ಕಳೆದ ವರ್ಷ ಮಾರ್ಚ್ಗೆ ಆ ಪ್ರಮಾಣ ಶೇಕಡಾ 24.3ಕ್ಕೆ ಏರಿಕೆ ಆಗಿದೆ.
ಕೇಂದ್ರ ಗೃಹ ಸಚಿವಾಲಯದಲ್ಲಿ ಶೇಕಡಾ 11.1ರಷ್ಟು, ರೈಲ್ವೆ ಇಲಾಖೆಯಲ್ಲಿ ಶೇಕಡಾ 20.5ರಷ್ಟು, ಅಂಚೆ ಇಲಾಖೆಯಲ್ಲಿ ಶೇಕಡಾ 30.5ರಷ್ಟು, ರಕ್ಷಣಾ ಇಲಾಖೆಯಲ್ಲಿ(ನಾಗರಿಕ ಹುದ್ದೆಗಳು) ಶೇಕಡಾ 40.2ರಷ್ಟು ಹಾಗೂ ಆದಾಯ ಇಲಾಖೆಯಲ್ಲಿ ಶೇಕಡಾ 41.6ರಷ್ಟು ಹುದ್ದೆಗಳು ಖಾಲಿ ಇವೆ. ಇತರೆ ಇಲಾಖೆಯಲ್ಲಿ ಶೇಕಡಾ 34.9ರಷ್ಟು ಹುದ್ದೆಗಳು ಖಾಲಿ ಇವೆ.
2022ರ ಮಾರ್ಚ್ ವೇಳೆಗೆ 9 ಲಕ್ಷದ 64 ಸಾವಿರದಷ್ಟು ಹುದ್ದೆಗಳು ಖಾಲಿ ಇದ್ದವು.
ಜೂನ್ 13ರಂದು ನಡೆದಿದ್ದ ಉದ್ಯೋಗ ಮೇಳದಲ್ಲಿ ಪ್ರಧಾನಿ ಮೋದಿಯವರು ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ 70 ಸಾವಿರ ಮಂದಿಗೆ ಉದ್ಯೋಗ ಪತ್ರವನ್ನು ಹಂಚಿಕೆ ಮಾಡಿದ್ದರು.
ಈ ವರ್ಷದ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಇಲಾಖೆ ಮತ್ತು ಸಚಿವಾಲಯಗಳಲ್ಲಿ 10 ಲಕ್ಷ ಮಂದಿಗೆ ನೌಕರಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ ವರ್ಷದ ಜೂನ್ 15ರಂದು ಘೋಷಿಸಿತ್ತು. ಈ 10 ಲಕ್ಷ ಉದ್ಯೋಗದಲ್ಲಿ ಅಗ್ನಿಪಥ್ ಯೋಜನೆಯಡಿಯಲ್ಲಿ ಸೇನೆಗೆ ಮಾಡಿಕೊಳ್ಳಲಾಗುವ 4,60,000 ಮಂದಿಯ ನೇಮಕಾತಿಯೂ ಸೇರಿದೆ.
ADVERTISEMENT