ಗ್ಯಾನವಾಪಿ ಮಸೀದಿಯಲ್ಲಿ ಮುಸಲ್ಮಾನರಿಗೆ ನಮಾಜ್ ಮಾಡಲು ಅವಕಾಶ ನೀಡಿ ಸುಪ್ರಿಂಕೋರ್ಟ್ ಪೀಠ ಮಧ್ಯಂತರ ಆದೇಶ ನೀಡಿದೆ. ಶಿವಲಿಂಗ ಪತ್ತೆ ಆಗಿದೆ ಎನ್ನಲಾಗಿರುವ ಪ್ರದೇಶವನ್ನು ಸಂರಕ್ಷಣೆ ಮಾಡುವಂತೆ ವಾರಾಣಸಿ ಜಿಲ್ಲಾಧಿಕಾರಿಗೆ ಸೂಚಿಸಿರುವ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿದ್ದ ಪೀಠ, ನಮಾಜ್ಗೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಹೇಳಿದೆ.
ಪ್ರಾರ್ಥನೆಗೂ ಮೊದಲು ಬಾವಿಯಲ್ಲಿ ಮುಸಲ್ಮಾನರು ದೇಹಶುದ್ಧಿ ಮಾಡುವ ಆಚರಣೆಗೂ ನ್ಯಾಯಾಲಯ ಅನುಮತಿ ನೀಡಿದೆ.
ವಾರಾಣಸಿ ಕೋರ್ಟ್ನ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮಸೀದಿ ಆಡಳಿತ ಸಮಿತಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಪ್ರತಿವಾದಿ ವಕೀಲರಿಗೆ ಹೃದಯಾಘಾತ:
ಪ್ರತಿವಾದಿಗಳ ಪರ ವಕೀಲ ಹರಿಶಂಕರ್ ಜೈನ್ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉತ್ತರಪ್ರದೇಶದ ಸರ್ಕಾರದ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್ ಗೆ ಮಾಹಿತಿ ನೀಡಿದರು.
ಶಿವಲಿಂಗ ಪತ್ತೆ ಆಗಿದ್ದರೆ ಸಮತೋಲನ ಕಾಯ್ದುಕೊಳ್ಳಬೇಕು. ಹೀಗಾಗಿ ಮುಸಲ್ಮಾನರಿಗೆ ನಮಾಜ್ ನಿರ್ಬಂಧ ಹೇರದೇ ಆ ಸ್ಥಳವನ್ನು ರಕ್ಷಣೆ ಮಾಡುವಂತೆ ನಾವು ವಾರಾಣಸಿ ಜಿಲ್ಲಾಧಿಕಾರಿಗೆ ಸೂಚಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.