ಸಾಲಗಾರರ ಕಾಟ ತಾಳಲಾರದೇ ಜಿಮ್ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿರೋ ಆರೋಪ ಕೇಳಿಬಂದಿದೆ.
ಮನೋಹರ್ (31) ಮೃತ ದುರ್ದೈವಿ. ಇವರು ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಜಿಮ್ ನಡೆಸುತ್ತಿದ್ದರು. ಹರೀಶ್, ಮಂಜುನಾಥ್ ಪ್ರಸಾದ್, ರಾಜು ಎಂಬುವವರ ಬಳಿ ಕೈ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಕೋವಿಡ್ ಕಾರಣಗಳಿಂದ ಆರ್ಥಿಕ ನಷ್ಟಕ್ಕೊಳಗಾಗಿದ್ದರು. ಕಾಲ ಕಾಲಕ್ಕೆ ಬಡ್ಡಿ ಕಟ್ಟಿಕೊಂಡು ಬಂದಿದ್ದರು. ಬಡ್ಡಿ ಜೊತೆಗೆ ಅಸಲನ್ನು ಹಿಂತಿರುಗಿಸುವಂತೆ ಸಾಲಗಾರರು ಒತ್ತಡ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಜನರ ಸಂಕಷ್ಟಕ್ಕೆ ನೆರವಾದ ನಟ ಜಿಮ್ ರವಿ
ಜೊತೆಗೆ ಮನೋಹರ ಅವರ ಜಿಮ್ ಹಾಗೂ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಹಿಗಾಗಿ ಸಾಲಗಾರರ ಕಾಟ ತಾಳಲಾರದೇ ಜಿಮ್ ಮಾಲೀಕ ಮನೋಹರ್ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಾಯುವ ಮುನ್ನ ವಿಡಿಯೋ ಹಾಗೂ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.