ವಿಶ್ಲೇಷಣೆ: ಅಕ್ಷಯ್ ಕುಮಾರ್
ದೀರ್ಘಕಾಲದ ರಾಜಕಾರಣದ ದೂರದೃಷ್ಟಿ ಇಲ್ಲದೆಯೇ ಸಂಕುಚಿತ ರಾಜಕಾರಣದ ಪರಿಧಿಯಲ್ಲಿ ಸಿಲುಕಿಕೊಂಡು ದ್ವೇಷ ರಾಜಕಾರಣದ ಜಿದ್ದಿಗೆ ತಾವಾಗಿಯೇ ಬೀಳುವ ಮೂಲಕ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯಸಭಾ ಚುನಾವಣೆಯಲ್ಲಿ ತಮಗೆ ಒದಗಿ ಬಂದಿದ್ದ ಅಪರೂಪದ ಸುವರ್ಣಾವಕಾಶವೊಂದನ್ನು ಕೈ ಚೆಲ್ಲುವುದರ ಮೂಲಕ ಭವಿಷ್ಯದಲ್ಲಿ ತಮ್ಮ ರಾಜಕಾರಣ `ಹತಾಶ ರಾಜಕಾರಣ’ಕ್ಕಷ್ಟೇ ಸೀಮಿತ ಆಗಬಹುದು ಎನ್ನುವುದರ ಸುಳಿವು-ಸಂಕೇತಗಳನ್ನು ನೀಡಿದ್ದಾರೆ.
ಕಾಂಗ್ರೆಸ್ ಬೆಂಬಲವಿಲ್ಲದೇ ಜೆಡಿಎಸ್ ಗೆಲ್ಲಲ್ಲ ಎನ್ನುವುದು ಕುಮಾರಸ್ವಾಮಿ ನಿಶ್ಚಿತ ಮತ್ತು ಸ್ಪಷ್ಟವಾಗಿ ಗೊತ್ತಿತ್ತು. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಕುಮಾರಸ್ವಾಮಿ ವಿದೇಶದಲ್ಲಿದ್ದರು. (ಆಪರೇಷನ್ ಕಮಲ ತೀವ್ರಗೊಂಡಿದ್ದಾಗಲೂ ಕುಮಾರಸ್ವಾಮಿ ಅವರು ಅಮೆರಿಕದಲ್ಲಿದ್ದರು. ಆಪರೇಷನ್ ಕಮಲ ಬಗ್ಗೆ ಗೊತ್ತಿದ್ದೇ ನಾನು ಅಮೆರಿಕಕ್ಕೆ ಹೋಗಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದರು.)
ರಾಜ್ಯಸಭಾ ಚುನಾವಣಾ ಫಲಿತಾಂಶ ಜೆಡಿಎಸ್ ಪಾಲಿಗೆ ಮರ್ಮಾಘಾತದ ಫಲಿತಾಂಶ. ಹೇಗೆ ಅಳೆದು ತೂಗಿ ನೋಡಿದರೂ ಕುಮಾರಸ್ವಾಮಿ ಈ ಚುನಾವಣೆಯಲ್ಲಿ ಸೋತರೆಂದೇ ಹೇಳಬಹುದು.
ರಾಜ್ಯಸಭಾ ಚುನಾವಣೆಯಲ್ಲಿ ಇದ್ದ ಒಂದು ಸ್ಥಾನವನ್ನೂ (ಹಾಲಿ ಸಂಸದ ಕುಪೇಂದ್ರ ರೆಡ್ಡಿ ಅವರ ಅವಧಿ ಇದೇ ತಿಂಗಳು ಅಂತ್ಯ) ಉಳಿಸಿಕೊಳ್ಳಲಾಗದೇ ಕಳೆದುಕೊಂಡಿತು ಜೆಡಿಎಸ್. ತನ್ನ ಅಭ್ಯರ್ಥಿ ಗೆಲ್ಲಲ್ಲ ಎಂದು ಖಚಿತವಾಗಿ ಗೊತ್ತಿದ್ದರೂ ಜಿದ್ದಿಗೆ ಬಿದ್ದ ಕುಮಾರಸ್ವಾಮಿ ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲ್ಲಿಸುವುದಕ್ಕೆ ಕಾರಣರಾದರು. (ಮೂಲಗಳ ಪ್ರಕಾರ ರಾಜ್ಯಸಭಾ ಮತದಾನಕ್ಕೂ ಮೊದಲು ಕುಮಾರಸ್ವಾಮಿ ಅವರು ಬಿಜೆಪಿ ನಾಯಕರ ಜೊತೆಗೆ ರಹಸ್ಯ ಮಾತುಕತೆಯನ್ನೂ ನಡೆಸಿದ್ದರು.)
ಬಿಜೆಪಿಯ ಮೂರನೇ ಅಭ್ಯರ್ಥಿಯ ಗೆಲುವಿನ ಮೂಲಕ ಮತ್ತು ಕಾಂಗ್ರೆಸ್ನ ಅಲ್ಪಸಂಖ್ಯಾತ ಅಭ್ಯರ್ಥಿಯ ಸೋಲಿನ ಮೂಲಕ ಜೆಡಿಎಸ್ ಬಿಜೆಪಿಯ ಮತ್ತೊಂದು ಅಂಗಪಕ್ಷವಷ್ಟೇ ಎಂಬ ಅಪವಾದವನ್ನು ಇನ್ನೂ ಗಟ್ಟಿಪಡಿಸಿಕೊಂಡಿತು. ಈ ಅಪವಾದ ಮತ್ತಷ್ಟು ಬಿಗಿಯಾಗಿ ಅಂಟಿಕೊಳ್ಳಲು ಕಾರಣರಾದವರು ಕುಮಾರಸ್ವಾಮಿ.
ತಮ್ಮ ಪಕ್ಷದವರನ್ನೂ ಗೆಲ್ಲಿಸಿಕೊಳ್ಳದೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸಿಗಬಹುದಾದ ರಾಜ್ಯಸಭಾ ಸಂಸದ ಸ್ಥಾನಮಾನವನ್ನೂ ತಪ್ಪಿಸಿದ ಹೊಸದೊಂದು ಕಳಂಕ ಈಗ ಕುಮಾರಸ್ವಾಮಿ ಅವರ ಬೆನ್ನಿಗೆ ಮೆತ್ತಿಕೊಂಡಿದೆ.
ವಿಧಾನಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್ನಿAದ ಸಭಾಪತಿ ಆಗಿದ್ದ ಪ್ರತಾಪ್ಚಂದ್ರ ಶೆಟ್ಟಿ ಅವರನ್ನು ಬಿಜೆಪಿ ಜೊತೆಗೂಡಿ ಕೆಳಗಿಸಿದ್ದ ಮತ್ತು ವಿಧಾನಸಭೆಯಲ್ಲಿ ಬಿಜೆಪಿಯ ವಿವಾದಿತ ಮಸೂದೆಗಳ ಬೆಂಬಲಕ್ಕೆ ಬಹಿರಂಗವಾಗಿ ನಿಂತು, ಸದನದ ಹೊರಗೂ ಕಮಲ ಪರವೇ ವಕಾಲತ್ತುಗಳನ್ನು ವಹಿಸಿ ಆ ಮೂಲಕ ಬಿಜೆಪಿಯನ್ನು ವಿರೋಧ ಪಕ್ಷ ಕಾಂಗ್ರೆಸ್ನ ದಾಳಿಯಿಂದ ಕಾಪಾಡಿಕೊಂಡು ಬಂದು `ವಿರೋಧ ಪಕ್ಷಗಳ ವಿರೋಧ ಪಕ್ಷ’ ಎಂಬ ಹೊಸ ಅನ್ವರ್ಥನಾಮವನ್ನು ಪಡೆದುಕೊಂಡ ಕುಮಾರಸ್ವಾಮಿ ಅವರಿಗೆ ಜೂನ್ ಎರಡನೇ ವಾರದಲ್ಲಿ `ಹೊಸ ರಾಜಕಾರಣ’ದ ಯೋಚನೆ ಹೊಳೆದಿದ್ದು ಮಾತ್ರ ವಿಚಿತ್ರ ಮತ್ತು ಸೋಜಿಗ.
ರಾಜ್ಯಸಭಾ ಚುನಾವಣಾ ಮೈತ್ರಿ ಮೂಲಕ ಹೊಸ ರಾಜಕಾರಣ ಮಾಡೋಣ ಎಂದು ಕಾಂಗ್ರೆಸ್ಗೆ ಮುಕ್ತ ಆಹ್ವಾನ ನೀಡಿದರು ಕುಮಾರಸ್ವಾಮಿ. (ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ದಿನಗಳ ಹಿಂದೆಯಷ್ಟೇ ಹೇಳಿದ ಬಳಿಕವೂ ಕುಮಾರಸ್ವಾಮಿ ಅವರು ಹೊಸ ರಾಜಕಾರಣಕ್ಕೆ ಕಾಂಗ್ರೆಸ್ ಆಹ್ವಾನ ನೀಡಿದ್ದು ಮತ್ತೊಂದು ವೈರುಧ್ಯ).
ಆದರೆ ಹೊಸ ರಾಜಕಾರಣಕ್ಕೆ ಬಹಿರಂಗ ಆಹ್ವಾನ ನೀಡಿದ ಕುಮಾರಸ್ವಾಮಿಯವರು ಆ ಸಾಧನೆಗಾಗಿ ತಾವೇ ವಿಧಿಸಿದ್ದ ಎರಡು ಗುಣಗಳನ್ನು ಪಾಲಿಸಲೇ ಇಲ್ಲ. ಕಲ್ಮಶ ಮತ್ತು ಸಂಕುಚಿತ ರಾಜಕಾರಣವನ್ನು ಬಿಡುವುದು. ಆದರೆ ಆ ಗುಣಗಳನ್ನು ತಾವು ಹೇರಿಕೊಳ್ಳದೇ, ಮುನ್ನಡಿ ಇಡದೇ ಆ ಗುಣಭಾರವನ್ನು ಕಾಂಗ್ರೆಸ್ ಮೇಲೆ ಹೊರಿಸಿದರು ಕುಮಾರಸ್ವಾಮಿ.
ಇದಕ್ಕಿಂತಲೂ ವಿಚಿತ್ರ ಅನ್ನಿಸಿದ್ದು ಕುಮಾರಸ್ವಾಮಿಯವರು `ಹೊಸ ರಾಜಕಾರಣ’ಕ್ಕಾಗಿ ಕಾಂಗ್ರೆಸ್ ಮನೆಯಲ್ಲಿ ಬಿರುಕು ಸೃಷ್ಟಿಸಲು ಯತ್ನಿಸಿ ಲಾಭ ಪಡೆಯಲು ನಡೆಸಿದ ತಂತ್ರಗಾರಿಕೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರ ಜೊತೆಗೆ ದೂರವಾಣಿಯಲ್ಲಿ ಮೈತ್ರಿ ಮಾತುಕತೆ ನಡೆಸಿ, ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಜೊತೆಗೂ ದೂರವಾಣಿಯಲ್ಲಿ ಮಾತಾಡಿದರು. ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಮೂಲಕ ಕಾಂಗ್ರೆಸ್ನ ದೆಹಲಿ ನಾಯಕರ ಮೇಲೆ ಒತ್ತಡ ಹಾಕಿಸಿದರು. `ಕಾಂಗ್ರೆಸ್ನಲ್ಲಿ ಎಲ್ಲರೂ ಮೈತ್ರಿಗೆ ಒಪ್ಪಿದ್ದಾರೆ, ಸಿದ್ದರಾಮಯ್ಯನವರೊಬ್ಬರು ಒಪ್ಪುತ್ತಿಲ್ಲ’ ಎನ್ನುವ ಮೂಲಕ ಹಸ್ತದ ಮನೆಯಲ್ಲಿ ಭಿನ್ನಮತೀಯ ಕಿಡಿ ಹೊತ್ತಿಸಿ ಕುಮಾರಸ್ವಾಮಿ ಚಳಿ ಕಾಯಿಸಿಕೊಳ್ಳಲು ಯತ್ನಿಸಿದ್ದು ವಿಚಿತ್ರ.
ದೆಹಲಿ ನಾಯಕರು ಹೇಳಿದರು ಎಂಬ ಮಾತ್ರಕ್ಕೆ ಪ್ರಾದೇಶಿಕ ನಾಯಕರನ್ನು ಕಡೆಗಣಿಸಿ ಹೋಗಲಾಗದು ಅಥವಾ ಪ್ರಾದೇಶಿಕ ಲೆಕ್ಕಾಚಾರಗಳು ಮುಖ್ಯ ಆದಾಗ ದೆಹಲಿ ನಾಯಕರು ತನ್ನ ಆ ಪ್ರಾದೇಶಿಕ ನಾಯಕನನ್ನು ಎದುರುಹಾಕಿಕೊಂಡು ಹೋಗಿ ಜಯಿಸಿದ ಉದಾಹರಣೆಗಳಿಲ್ಲ. ಕಾಂಗ್ರೆಸ್ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಎರಡೂ ಪಕ್ಷಗಳಿಗೆ ನಿರ್ಣಾಯಕರಾಗುವುದು ಇದೇ ಕಾರಣಕ್ಕೆ. ಜೆಡಿಎಸ್ನಲ್ಲಿ ಆಗಲ್ಲ, ಅದು ಕೇವಲ ದೇವೇಗೌಡರ ಮತ್ತು ಕುಮಾರಸ್ವಾಮಿ ಆಜ್ಞಾನುಸಾರ ನಡೆಯುವ ಪಕ್ಷ.
ಕರ್ನಾಟಕದಲ್ಲಿ ಕಾಂಗ್ರೆಸ್ ಸಿದ್ದರಾಮಯ್ಯನವರ ಮಾತನ್ನು ಮೀರಿ ಹೋಗದು ಎಂಬ ಕನಿಷ್ಠ ಸತ್ಯವನ್ನು ಕುಮಾರಸ್ವಾಮಿ ಅರ್ಥಮಾಡಿಕೊಳ್ಳದೇ ಹೋಗಿದ್ದು ವಿಚಿತ್ರ. ಅಥವಾ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಿಸಿ ಕಾಂಗ್ರೆಸ್ ಜೊತೆಗೆ ತಾನು ಸಖ್ಯ ಸಾಧಿಸಬಹುದು ಮತ್ತು ಆ ಮೂಲಕ ತನ್ನ ರಾಜಕೀಯ ವೈರಿಯ ರಾಜಕೀಯಕ್ಕೆ ಮಹಾ ಘಾಸಿ ಮಾಡಬಹುದು ಎಂಬ ಕುಮಾರಸ್ವಾಮಿ ಅವರ ದ್ವೇಷಭರಿತ ಮತ್ತು ಸಂಕುಚಿತ ಲೆಕ್ಕಾಚಾರವೇ ಕುಮಾರಸ್ವಾಮಿ ಅವರೇ ಹೇಳಿದ `ಹೊಸ ರಾಜಕಾರಣ’ದ ಆರಂಭಕ್ಕೆ ಅಡ್ಡಿ ಆಯಿತು.
ಹಾಗೇ ನೋಡಿದರೆ ಕುಮಾರಸ್ವಾಮಿ ಅವರು ತಮ್ಮ ಮನೆಬಾಗಿಲಿಗೆ ಬಂದಿದ್ದ ಅವಕಾಶವನ್ನು `ಕಲ್ಮಶ-ದ್ವೇಷ-ಸಂಕುಚಿತತೆ’ ಬಿಟ್ಟು ಒಪ್ಪಿಕೊಂಡಿದ್ದರೆ ಜೆಡಿಎಸ್ ನಾಯಕನಿಗೆ ಸಿಗುತ್ತಿದ್ದ ಮೇಲುಗೈಗಳೇ ಬೇರೆ.
ಜೆಡಿಎಸ್ ಶಾಸಕರು ಮತ ಹಾಕಿದರೂ ಗೆಲ್ಲದ ಕುಪೇಂದ್ರ ರೆಡ್ಡಿ ಅವರ ಬದಲು ಕಾಂಗ್ರೆಸ್ನ ಮನ್ಸೂರ್ ಅಲಿ ಖಾನ್ ಅವರನ್ನು ಗೆಲ್ಲಿಸಲು ಕುಮಾರಸ್ವಾಮಿ ಅವರು ಬೆನ್ನಹಿಂದೆ ನಿಂತಿದ್ದಾರೆ ಎರಡು ಕಳಂಕಗಳಿAದ ಶಾಶ್ವತವಾಗಿ ಮುಕ್ತಿ ಸಿಗುತ್ತಿತ್ತು. 1) ಬಿಜೆಪಿ ಬಿ ಟೀಂ ಜೆಡಿಎಸ್ ಅಲ್ಲ ಎನ್ನುವುದು. 2) ಅಲ್ಪಸಂಖ್ಯಾತ ಸಮುದಾಯಕ್ಕೆ ಸ್ಥಾನಮಾನ ಕೊಡಿಸಲು ಜೆಡಿಎಸ್ ಹಿಂಜರಿಯಲ್ಲ ಎನ್ನುವುದು. ಆದರೆ ಚುನಾವಣೆಯಲ್ಲಿ ಇದ್ದ ಒಂದು ಸ್ಥಾನ ಸೋತ ಜೆಡಿಎಸ್ ಸೈದ್ಧಾಂತಿಕವಾಗಿಯೂ ಸೋತಿತು. ಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಮುಸಲ್ಮಾನರನ್ನು ಗೆಲ್ಲಿಸಿಕೊಂಡಿಲ್ಲ.
ಇದರ ಜೊತೆಗೆ 37 ಶಾಸಕರಿದ್ದರೂ ನಿಮ್ಮನ್ನು ನಾವಾಗಿಯೇ ಮುಖ್ಯಮಂತ್ರಿ ಮಾಡಿದ್ದೆವು ಎಂಬ ಕಾಂಗ್ರೆಸ್ನ ಋಣಬಾಧೆಯಲ್ಲಿರುವ ಕುಮಾರಸ್ವಾಮಿ ಆ ಋಣದಿಂದ ಶಾಶ್ವತವಾಗಿ ಮುಕ್ತರಾಗುತ್ತಿದ್ದರು. (ರಾಜ್ಯಸಭಾ ಚುನಾವಣೆಯಲ್ಲಿ 32 ಶಾಸಕರಿರುವ ನಾವು 25 ಹೆಚ್ಚುವರಿ ಮತ ಹೊಂದಿರುವ ನಿಮಗಿಂತ ದೊಡ್ಡ ಪಕ್ಷ, ಹೀಗಾಗಿ ನೀವೇ ನಮ್ಮನ್ನು ಬೆಂಬಲಿಸಬೇಕು ಎಂದು ಕಾಂಗ್ರೆಸ್ಗೆ ಹೇಳಿದ್ದರು ಕುಮಾರಸ್ವಾಮಿ).
ಹೊಸ ರಾಜಕಾರಣದ ಮುಕ್ತ ಆಹ್ವಾನ ಕೊಟ್ಟ ಕುಮಾರಸ್ವಾಮಿಯವರೇ ತಾವೇ ಮುಂದೆ ನಿಂತು ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಬಾಗಿಲು ಮುಚ್ಚಿ ಬೀಗ ಹಾಕಿದ್ದು ಇನ್ನೊಂದು ವಿಚಿತ್ರ. ಈಗ ಕುಮಾರಸ್ವಾಮಿ ಅವರಿಗೆ ಮೈತ್ರಿಗೆ ಶಾಶ್ವತವಾಗಿ ತೆರೆದುಕೊಂಡಿರುವುದು ಬಿಜೆಪಿ ಮನೆ ಬಾಗಿಲಷ್ಟೇ.