3 ಲಕ್ಷದ 27 ಸಾವಿರ ಕೋಟಿ ರೂಪಾಯಿ ಮೊತ್ತದ ಗ್ಯಾರಂಟಿ ಬಜೆಟ್ ಮಂಡಿಸಿದ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah Budget) ಅವರ ಆಯವ್ಯಯದ ಬಗ್ಗೆ ಕೇಳಿಬಂದಿರುವ ಪ್ರಮುಖ ಟೀಕೆ ಖಾತ್ರಿ ಯೋಜನೆಗಳ ಜಾರಿಗಾಗಿ ಸಾಲದ ಹೊರೆ (Debt Liabilities) ಹೊರಿಸಲಾಗಿದೆ ಎನ್ನುವುದು.
ಕರ್ನಾಟಕದ (Karnataka Budget) ಜನರ ಮೇಲೆ ಹೇರಲಾದ ಸಾಲದ ಹೊರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Karnataka Congress) ಮತ್ತು ಬಿಜೆಪಿ (BJP Karnataka) ಹಾಗೂ ಜೆಡಿಎಸ್ (JDS) ನಡುವೆ ಸಂಘರ್ಷಕ್ಕೂ ಕಾರಣವಾಗಿತ್ತು.
ಕಳೆದ ಐದು ವರ್ಷಗಳಲ್ಲಿ ಬಜೆಟ್ ಗಾತ್ರ ಮತ್ತು ಸಾಲ (Karnataka State Debt) ಹೇಗೆ ಏರಿಕೆ ಕಂಡಿತು ಎನ್ನುವುದನ್ನು ತಿಳಿದುಕೊಂಡರೆ ಕರ್ನಾಟಕದ ಮೇಲೆ ಋಣ ಭಾರದ ಮೂಟೆಯನ್ನು ಹೊರಿಸಿದ್ದರು ಯಾರು ಎನ್ನುವುದು ಸ್ಪಷ್ಟವಾಗುತ್ತದೆ..?
2018ರ ಆರ್ಥಿಕ ವರ್ಷದಿಂದ ಸಾಲದ ಲೆಕ್ಕಾಚಾರ: ಕುಮಾರಸ್ವಾಮಿ ಅವಧಿ: (H D Kumarswamy)
2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡಿಸಿದ ಮೊದಲ ಬಜೆಟ್ನಲ್ಲಿ 47,134 ಕೋಟಿ ರೂಪಾಯಿ ಸಾಲ ಎತ್ತುವಳಿ (Borrowings) ಮಾಡಲಾಯಿತು. ಆ ಮೂಲಕ ಸಾಲದ ಒಟ್ಟು ಮೊತ್ತ 2 ಲಕ್ಷದ 92 ಸಾವಿರದ 220 ಕೋಟಿ ರೂಪಾಯಿಗೆ ಏರಿಕೆ ಆಯಿತು. ಇದು ರಾಜ್ಯದ ಒಟ್ಟು ಉತ್ಪನ್ನದ ಶೇಕಡಾ 20.1ರಷ್ಟಿತ್ತು. ಈ ಅವಧಿಯಲ್ಲಿ ಮಾಡಲಾದ ಸಾಲ ಮರು ಪಾವತಿ (Loan Repayment) 11,368 ಕೋಟಿ ರೂಪಾಯಿ.
2019-20ರ ಆರ್ಥಿಕ ವರ್ಷದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ಸಮ್ಮಿಶ್ರ ಸರ್ಕಾರದ 2ನೇ ಆಯವ್ಯಯದಲ್ಲಿ 48,601 ಕೋಟಿ ರೂಪಾಯಿ ಸಾಲ ಎತ್ತುವಳಿ ಮಾಡಲಾಯಿತು. ಈ ಮೂಲಕ ಸಾಲದ ಒಟ್ಟು ಮೊತ್ತ 3 ಲಕ್ಷದ 27 ಸಾವಿರದ 209 ಕೋಟಿ ರೂಪಾಯಿಗೆ ಏರಿಕೆ ಆಯಿತು. ಇದು ರಾಜ್ಯ ಒಟ್ಟು ಉತ್ಪನ್ನದ (Karnataka GSDP) ಶೇಕಡಾ 20.60ರಷ್ಟಿತ್ತು. ಈ ಆಯವ್ಯಯಲ್ಲಿ 9,964 ಕೋಟಿ ರೂಪಾಯಿ ಸಾಲ ಮರು ಪಾವತಿ ಆಯಿತು.
ಯಡಿಯೂರಪ್ಪ ಅವಧಿ: (B S Yediyurappa)
ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ 2020-21ರಲ್ಲಿ ಮಂಡಿಸಿದ ಬಜೆಟ್ನಲ್ಲಿ ಬರೋಬ್ಬರೀ 52,918 ಕೋಟಿ ರೂಪಾಯಿ ಸಾಲ ಎತ್ತಲಾಯಿತು. ಆಗ ಸಾಲದ ಒಟ್ಟು ಮೊತ್ತ 3 ಲಕ್ಷದ 68 ಸಾವಿರದ 692 ಕೋಟಿ ರೂಪಾಯಿಗೆ ಹೆಚ್ಚಳವಾಯಿತು. ಇದು ರಾಜ್ಯದ ಒಟ್ಟು ಉತ್ಪನ್ನದ ಶೇಕಡಾ 20.42ರಷ್ಟಿತ್ತು. ಈ ಅವಧಿಯಲ್ಲಿ 11,605 ಕೋಟಿ ಸಾಲ ಮರು ಪಾವತಿ ಘೋಷಿಸಲಾಯಿತು.
2021-22ರಲ್ಲಿ ಯಡಿಯೂರಪ್ಪ ಅವರು ಮಂಡಿಸಿದ ಎರಡನೇ ಬಜೆಟ್ನಲ್ಲೂ ಬರೋಬ್ಬರೀ 71,332 ಕೋಟಿ ರೂಪಾಯಿ ಸಾಲ ಎತ್ತುವಳಿ ಮಾಡಲಾಯಿತು. ಈ ಮೂಲಕ ರಾಜ್ಯದ ಒಟ್ಟು ಸಾಲದ ಪ್ರಮಾಣ 4 ಲಕ್ಷದ ಗಡಿ ದಾಟಿ 4 ಲಕ್ಷದ 57 ಸಾವಿರದ 899 ಕೋಟಿ ರೂಪಾಯಿಗೆ ಏರಿಕೆ ಆಯಿತು. ಈ ಮೂಲಕ ಸಾಲ ರಾಜ್ಯದ ಒಟ್ಟು ಉತ್ಪನ್ನದ ಶೇಕಡಾ 26.9ರಷ್ಟಿತ್ತು. ಇದು ಆರ್ಥಿಕ ಶಿಸ್ತು ನಿರ್ವಹಣೆಗಾಗಿ ಇರುವ ಹಣಕಾಸು ಹೊಣೆಗಾರಿಕೆ ನಿಯಮಗಳ ಉಲ್ಲಂಘನೆ ಆಯಿತು. ಈ ಅವಧಿಯಲ್ಲಿ ಘೋಷಿಸಲಾಗಿದ್ದ ಸಾಲ ಮರು ಪಾವತಿ ಮೊತ್ತ 14,565 ಕೋಟಿ ರೂಪಾಯಿ.
ಬಸವರಾಜ ಬೊಮ್ಮಾಯಿ ಅವಧಿ: (Basavaraj Bommai)
2022-23ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮೊದಲ ಆಯವ್ಯಯದಲ್ಲಿ 72 ಸಾವಿರ ಕೋಟಿ ರೂಪಾಯಿ ಸಾಲ ಎತ್ತುವಳಿ ಮಾಡಿದರು. ಈ ಮೂಲದ ರಾಜ್ಯದ ಮೇಲಿನ ಒಟ್ಟು ಸಾಲದ ಪ್ರಮಾಣ 5 ಲಕ್ಷದ 18 ಸಾವಿರದ 336 ಕೋಟಿ ರೂಪಾಯಿಗೆ ಏರಿಕೆ ಆಯಿತು. ಇದು ರಾಜ್ಯದ ಒಟ್ಟು ಉತ್ಪನ್ನದ ಶೇಕಡಾ 27.49ರಷ್ಟಿತ್ತು. ಎರಡನೇ ಬಾರಿಯೂ ಈ ಮೂಲಕ ಹಣಕಾಸು ಹೊಣೆಗಾರಿಕೆ ನಿಯಮಗಳ ಉಲ್ಲಂಘನೆ ಆಯಿತು. ಈ ಅವಧಿಯಲ್ಲಿ ಮಾಡಲಾದ ಸಾಲ ಮರುಪಾವತಿ ಮೊತ್ತ 14,179 ಕೋಟಿ ರೂಪಾಯಿ.
2023-24ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೊನೆಯ ಬಜೆಟ್ನಲ್ಲಿ (ಲೇಖಾನುದಾನ) 77 ಸಾವಿರದ 750 ಕೋಟಿ ರೂಪಾಯಿ ಸಾಲ ಎತ್ತುವಳಿ ಮಾಡಿದರು. ಈ ಮೂಲಕ ಸಾಲದ ಮೊತ್ತ 5 ಲಕ್ಷದ 64 ಸಾವಿರದ 896 ಕೋಟಿ ರೂಪಾಯಿಗೆ ಹೆಚ್ಚಳವಾಯಿತು. ಇದು ರಾಜ್ಯದ ಒಟ್ಟು ಉತ್ಪನ್ನದ ಶೇಕಡಾ 22.64ರಷ್ಟಿತ್ತು. ಈ ಅವಧಿಯಲ್ಲಿ ಘೋಷಿಸಲಾದ ಸಾಲ ಮರು ಪಾವತಿ ಒಟ್ಟು ಮೊತ್ತ 22,441 ಕೋಟಿ ರೂಪಾಯಿ.
ಕುಮಾರಸ್ವಾಮಿಯಿಂದ ಬೊಮ್ಮಾಯಿವರೆಗೆ:
ಕುಮಾರಸ್ವಾಮಿ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿ ಅವರ ಅವಧಿಯವರೆಗೆ ರಾಜ್ಯದಲ್ಲಿ ಸಾಲದ ಮೊತ್ತ ಬರೋಬ್ಬರೀ 3 ಲಕ್ಷದ 22 ಸಾವಿರದ 896 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿದೆ.
ಸಿದ್ದರಾಮಯ್ಯ ಹೊಸ ಆಯವ್ಯಯ:
2023-24ರ ಅವಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ ಆಯವ್ಯಯದಲ್ಲಿ ಮಾಡಲಾಗಿರುವ ಸಾಲದ ಮೊತ್ತ 85,818 ಕೋಟಿ ರೂಪಾಯಿ. ಈ ಮೂಲಕ ಒಟ್ಟು ಸಾಲದ ಮೊತ್ತ 5 ಲಕ್ಷದ 71 ಸಾವಿರದ 665 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ರಾಜ್ಯದ ಒಟ್ಟು ಉತ್ಪನ್ನದಲ್ಲಿ ಸಾಲದ ಪ್ರಮಾಣ ಶೇಕಡಾ 22.3ರಷ್ಟಿತ್ತು. ಈ ಅವಧಿಯಲ್ಲಿ ಘೋಷಿಸಲಾಗಿರುವ ಸಾಲ ಮರು ಪಾವತಿಯ ಒಟ್ಟು ಮೊತ್ತ 22,441 ಕೋಟಿ ರೂಪಾಯಿ.
ಬಸವರಾಜ ಬೊಮ್ಮಾಯಿ ಅವರ ಕೊನೆಯ ಬಜೆಟ್ನಲ್ಲಿ ಮಾಡಲಾದ ಸಾಲದ ಮೊತ್ತಕ್ಕಿಂತ ತಮ್ಮ 14ನೇ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರ 8,068 ಕೋಟಿ ರೂಪಾಯಿ ಹೆಚ್ಚುವರಿ ಸಾಲ ಮಾಡಿದ್ದಾರೆ.
ಕುಮಾರಸ್ವಾಮಿ ಅವಧಿಯಲ್ಲೂ ಸಾಲ ಭಾರೀ ಹೆಚ್ಚಳ:
ಕುಮಾರಸ್ವಾಮಿ ಅವರು ತಮ್ಮ ಎರಡು ಬಜೆಟ್ನಲ್ಲಿ ಅಂದರೆ 2 ವರ್ಷದಲ್ಲೇ ಬರೋಬ್ಬರೀ ಒಟ್ಟು 95 ಸಾವಿರದ 735 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಇವರ ಅವಧಿಯಲ್ಲಿ ಸಾಲದ ಮೊತ್ತ 2 ಲಕ್ಷದ 42 ಸಾವಿರದ 220 ಕೋಟಿ ರೂಪಾಯಿಯಿಂದ 3 ಲಕ್ಷದ 27 ಸಾವಿರದ 209 ಕೋಟಿ ರೂಪಾಯಿಗೆ ಏರಿಕೆ ಆಗಿದೆ.
ಬಿಜೆಪಿ ಅವಧಿಯಲ್ಲಿ ಸಾಲ ಅತ್ಯಧಿಕ ಹೆಚ್ಚಳ: ಸಾಲದಲ್ಲೇ ಹೊಸ ದಾಖಲೆ
ಯಡಿಯೂರಪ್ಪರ ಎರಡು ಬಜೆಟ್ ಮತ್ತು ಬಸವರಾಜ ಬೊಮ್ಮಾಯಿ ಅವರ ಎರಡು ಆಯವ್ಯಯದಲ್ಲಿ 4 ಆರ್ಥಿಕ ವರ್ಷದಲ್ಲಿ ಬಿಜೆಪಿ ಸರ್ಕಾರ ಬರೋಬ್ಬರೀ 2 ಲಕ್ಷದ 74 ಸಾವಿರ ಕೋಟಿ ರೂಪಾಯಿಯಷ್ಟು ಸಾಲ ಮಾಡಿದೆ.
ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರದ ಸಾಲ:
ಆದರೆ ಸಿದ್ದರಾಮಯ್ಯ ಅವರು ಮೊದಲಾವಧಿಗೆ ಮುಖ್ಯಮಂತ್ರಿ ಆಗಿದ್ದ ವೇಳೆ 2013ರಿಂದ 2018ರ ಲೇಖಾನುದಾನದವರೆಗೆ ಐದು ವರ್ಷದಲ್ಲಿ ಮಾಡಿದ್ದ ಒಟ್ಟು ಸಾಲದ ಮೊತ್ತ 1 ಲಕ್ಷದ 3 ಸಾವಿರ ಕೋಟಿ ರೂಪಾಯಿಯಿಂದ 2 ಲಕ್ಷದ 42 ಸಾವಿರ ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. ಅಂದರೆ ಐದು ವರ್ಷದಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿದ್ದ ಸಾಲ 1 ಲಕ್ಷದ 39 ಸಾವಿರ ಕೋಟಿ ರೂಪಾಯಿ.
ಈಗ 52 ಸಾವಿರ ಕೋಟಿ ರೂಪಾಯಿಯಷ್ಟು ಭಾರೀ ಮೊತ್ತದ ಸಾರ್ವತ್ರಿಕ ಗ್ಯಾರಂಟಿ ಯೋಜನೆ ಹೊರತಾಗಿಯೂ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಬಜೆಟ್ನಲ್ಲಿ ಸಾಲದ ಪ್ರಮಾಣ ಭಾರೀ ಏರಿಕೆ ಆಗಿಲ್ಲ.
ಮಾಹಿತಿ ಆಧಾರ: 2018ರಿಂದ 2023ರವರೆಗಿನ ಬಜೆಟ್ ಭಾಷಣಗಳು (Karnataka Budget Speeches)
ADVERTISEMENT
ADVERTISEMENT