ಕರ್ನಾಟಕದಲ್ಲಿ ಮುಸಲ್ಮಾನ ಸಮುದಾಯದ ವಿರುದ್ಧ ಬಿಜೆಪಿ ಕಾರ್ಯಕರ್ತರು, ನಾಯಕರು, ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಹಬ್ಬಿಸುತ್ತಿರುವ ವ್ಯಾಪಾರ ಬಹಿಷ್ಕಾರಕ್ಕೆ ಈಗ ಹಲಾಲ್ ಕಟ್ ಮಾಂಸ ನಿಷೇಧವೂ ಸೇರಿಕೊಂಡಿದೆ. ವಿಹೆಚ್ಪಿ ಮತ್ತು ಬಜರಂಗದಳದ ಕಾರ್ಯಕರ್ತರು ಗಲ್ಲಿ ಗಲ್ಲಿಗಳಲ್ಲಿ ತಿರುಗಾಡಿ ಪತ್ರಗಳನ್ನು ಹಂಚುತ್ತಿದ್ದಾರೆ.
ಆದರೆ ಈ ವ್ಯಾಪಾರಕ್ಕೆ ಧರ್ಮ ಬಹಿಷ್ಕಾರ ಎನ್ನುವುದು ರಾಜಕೀಯ ಮುಖವಾಡವಷ್ಟೇ. ರಾಜಕೀಯ ನಾಯಕರ ಈ ಮುಖವಾಡಗಳೆಲ್ಲವೂ ಈಗ ಕಳಚಿಕೊಳ್ಳುತ್ತಿದೆ. ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಕಲೆಹಾಕಿರುವ ಕೆಲವೊಂದಿಷ್ಟು ಮಾಹಿತಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಪ್ರತಿಕ್ಷಣದ್ದು. ಈ ಮಾಹಿತಿಗಳು ವ್ಯಾಪಾರ ಬಹಿಷ್ಕಾರದ ಗುಲ್ಲೆಬಿಸುತ್ತಿರುವ ಬಿಜೆಪಿ ನಾಯಕರು ಮತ್ತು ಕೆಲವು ಸಂಘಟನೆಗಳ ವಾದ ಕೇವಲ ಕ್ಷಣಿಕ ಮುಖವಾಡಗಳಷ್ಟೇ ಎನ್ನುವುದನ್ನು ಸಾಬೀತುಪಡಿಸುತ್ತಿದೆ.
ದೇಶದ ಅತೀ ದೊಡ್ಡ ಔಷಧ ಕಂಪನಿ ಹಿಮಾಲಯ ತನ್ನ ಉತ್ಪನ್ನಗಳಿಗೆ ಹಲಾಲ್ ಪದ್ಧತಿಯನ್ನು ಪಾಲಿಸುತ್ತಿರುವುದಾಗಿ ಘೋಷಿಸಿಕೊಂಡಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಇದನ್ನೇ ನೆಪವಾಗಿಸಿಕೊಂಡು ಬಿಜೆಪಿ ಲೋಕಸಭಾ ಸಂಸದರೂ ಆಗಿದ್ದ ಪರೇಶ್ ರಾವಲ್ ಹಿಮಾಲಯ ಸಂಸ್ಥೆಯ ಉತ್ಪನ್ನಗಳನ್ನು ಬಹಿಷ್ಕರಿಸಿ ಟ್ವೀಟಿಸಿದ್ದಾರೆ. ಬಲಪಂಥೀಯ ಸಿದ್ಧಾಂತದೊಂದಿಗೆ ಗುರುತಿಸಿಕೊಂಡಿರುವ ಸಿಬಿಐ ಮಾಜಿ ಮುಖ್ಯಸ್ಥ ಎಂ ನಾಗೇಶ್ವರ ರಾವ್ ಕೂಡಾ ಟ್ವೀಟಿಸಿದ್ದಾರೆ.
ಆದರೆ ಹೀಗೆ ಹಲಾಲ್ ಕಟ್ ಪದ್ಧತಿಯನ್ನು ಹಿಮಾಲಯ ಕಂಪನಿ ಮಾತ್ರ ಅನುಸರಿಸುತ್ತಿಲ್ಲ. ದೇಶದ ಎಲ್ಲಾ ಗ್ರಾಹಕೋತ್ಪನ್ನ ಉತ್ಪಾದಕ ಕಂಪನಿಗಳು ಪಾಲಿಸುತ್ತಿವೆ. ಜಮಾತ್ ಉಲೇಮಾ ಹಲಾಲ್ ಫೌಂಡೇಷನ್ ನಿಂದ ಪ್ರಮಾಣಪತ್ರವನ್ನು ಪಡೆಯುತ್ತಿವೆ.
ಪ್ರಧಾನಿ ನರೇಂದ್ರ ಮೋದಿಯವರ ಪರಮಾಪ್ತ, ಗುಜರಾತ್ ಮೂಲದ ಉದ್ಯಮಿ, ಕುಬೇರ ಗೌತಮ್ ಅದಾನಿ ಮಾಲೀಕತ್ವದ ಕಂಪನಿಗಳ ಉತ್ಪನ್ನಗಳಿಗೂ ಹಲಾಲ್ ಕಟ್ ಪದ್ಧತಿ ಅನುಸರಿಸಲಾಗುತ್ತಿದೆ. ಅದಾನಿ ವಿಲ್ಮಾರ್ ಲಿಮಿಟೆಡ್ ತನ್ನ 137 ಉತ್ಪನ್ನಗಳಿಗೆ ಹಲಾಲ್ ಕಟ್ ಪದ್ಧತಿಯನ್ನು ಪಾಲಿಸುತ್ತಿದೆ. 2025ರವರೆಗೂ ಈ ಬಗ್ಗೆ ಜಮಾತ್ ಉಮೇಮಾ ಹಲಾಲ್ ಫೌಂಡೇಷನ್ ನಿಂದ ಅದಾನಿ ಕಂಪನಿ ಹಲಾಲ್ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.
ಇನ್ನು ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್. ಸೂರತ್ ಮತ್ತು ಮುಂಬೈನಲ್ಲಿ ಉತ್ಪಾದನೆ ಆಗುವ ತನ್ನ ಉತ್ಪನ್ನಗಳಿಗೆ ಹಲಾಲ್ ಪ್ರಮಾಣಪತ್ರ ಪಡೆದಿದೆ.
ಟಾಟಾ ಕನ್ಸುಮರ್ ಪ್ರಾಡಕ್ಟ್ ಲಿಮಿಟೆಡ್ ಕೂಡಾ ಹಲಾಲ್ ಪ್ರಮಾಣ ಪತ್ರ ಪಡೆದಿದೆ. ಈ ಪ್ರಮಾಣದಡಿ 62 ಉತ್ಪನ್ನಗಳನ್ನು ಹಲಾಲ್ ಪದ್ಧತಿಯ ಪ್ರಕಾರ ಉತ್ಪಾದನೆ ಮಾಡಲಾಗುತ್ತದೆ. ಟಾಟಾ ಕೆಮಿಕಲ್ಸ್ ಕೂಡಾ ಹಲಾಲ್ ಪ್ರಮಾಣಪತ್ರ ಪಡೆದಿದೆ.
ಪಾರ್ಲೆ ಕಂಪನಿ, ಬೂಸ್ಟ್, ಹಾರ್ಲಿಕ್ಸ್ ಹೀಗೆ ಜನಪ್ರಿಯ ಉತ್ಪನ್ನಗಳನ್ನು ಉತ್ಪಾದಿಸುವ ದೇಶದ ಅತೀ ದೊಡ್ಡ ಗ್ರಾಹಕೋತ್ಪನ್ನಗಳ ಕಂಪನಿ ಹಿಂದೂಸ್ತಾನ ಯುನಿಲಿವರ್ ಲಿಮಿಟೆಡ್, ಗುಜರಾತ್ನಲ್ಲಿರುವ ಕೃಷ್ಣ ಇಂಡಸ್ಟ್ರೀಸ್, ಗುಜರಾತ್ ಮೂಲದ ಪ್ರಸಿದ್ಧ ಅಮೂಲ್, ಖ್ಯಾತ ಐಸ್ ಕ್ರೀಂ ಕಂಪನಿ ಕ್ವಾಲಿಟಿ, ಡಾಬರ್ ಕಂಪನಿ, ಮಿಲ್ಕಿ ಮಿಸ್ಟಿ ಡೈರಿ, ದೇಸಾಯಿ ಉತ್ಪನ್ನಗಳು, ಮದರ್ ಡೈರಿ, ನೆಸ್ಲೆ ಇಂಡಿಯಾ, ಐಟಿಸಿ ಕಂಪನಿಯೂ ತನ್ನ ಉತ್ಪನ್ನಗಳಿಗೆ ಹಲಾಲ್ ಪದ್ಧತಿ ಪಾಲಿಸುವ ಪ್ರಮಾಣಪತ್ರ ಪಡೆದಿವೆ.
ಅದಕ್ಕಿಂತಲೂ ಅಚ್ಚರಿ ಎಂದರೆ ಯೋಗಗುರು ಬಾಬಾ ರಾಮದೇವ್ ಅವರ ರಾಮದೇವ್ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಬರೋಬ್ಬರೀ 190 ಉತ್ಪನ್ನಗಳಿಗೆ ಹಲಾಲ್ ಪಾಲಿಸುವ ಪ್ರಮಾಣಪತ್ರ ಪಡೆದುಕೊಂಡಿದೆ. ಪತಂಜಲಿ ಆರ್ಯುವೇದ ಲಿಮಿಟೆಡ್ ಕೂಡಾ ತನ್ನ ಉತ್ಪನ್ನಗಳಿಗೆ ಹಲಾಲ್ ಪದ್ಧತಿ ಪಾಲಿಸುವ ಪ್ರಮಾಣಪತ್ರ ಪಡೆದಿದೆ.
ಬ್ರಿಟಾನಿಯಾ, ಟಿಫಾನಿ ಫುಡ್, ಓಮ್ ಇಂಡಸ್ಟ್ರಿ, ಸಾಂಬಾರು ಪದಾರ್ಥಗಳ ಪ್ರಸಿದ್ಧ ಕಂಪನಿ ಎವರೆಸ್ಟ್ ಕೂಡಾ ಹಲಾಲ್ ಕಟ್ ಪ್ರಮಾಣಪತ್ರ ಪಡೆದಿದೆ.
ಮೋಹನ್ದಾಸ್ ಪೈ ಮತ್ತು ಅವರ ಪುತ್ರ ಹೂಡಿಕೆ ಮಾಡಿರುವ ಲೀಸಿಯಸ್ ಮಾಂಸ ಉತ್ಪನ್ನ ಕಂಪನಿಯೂ ಹಲಾಲ್ ಕಟ್ ಪ್ರಮಾಣಪತ್ರವನ್ನು ಮಾತ್ರ ಪಡೆದಿದೆ. ಧರ್ಮ ಮತ್ತು ರಾಷ್ಟ್ರದ ವಿಷಯ ಬಂದಾಗ ಮೋಹನ್ದಾಸ್ ಪೈ ಅಲ್ಪಸಂಖ್ಯಾತ ಸಮುದಾಯವನ್ನು ನಿಂದಿಸುವಲ್ಲಿ ಹಿಂದೆ ಉಳಿದಿಲ್ಲ. ಆದರೆ ಅವರ ಹೂಡಿಕೆ ಇರುವ ಕಂಪನಿಯಲ್ಲಿ ಪಾಲನೆ ಆಗುತ್ತಿರುವುದು ಹಲಾಲ್ ಕಟ್ ಮಾತ್ರ, ಜಟ್ಕಾ ಕಟ್ ಅಲ್ಲ. 2019ರಲ್ಲಿ ಈ ಬಗ್ಗೆ ಗ್ರಾಹಕರಿಗೆ ಸಂಸ್ಥೆಯೇ ಸ್ಪಷ್ಟನೆ ಕೊಟ್ಟಿರುವ ಸಾಕ್ಷ್ಯವೂ ಸಿಕ್ಕಿದೆ.
ಟೆಂಡರ್ ಚಿಕನ್. ಇದು ಕನ್ನಡಿಗರದ್ದೇ. ಇದರ ಮಾಲೀಕರು ಕಿಶೋರ್ ಹೆಗಡೆ. 2020ರ ಆಗಸ್ಟ್ 10ರಂದು ಟೆಂಡರ್ ಚಿಕನ್ ಅಂಗಡಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಟೆಂಡರ್ ಚಿಕನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಟೆಂಡರ್ ಚಿಕನ್ ಕೂಡಾ ಹಲಾಲ್ ಕಟ್ ಪದ್ಧತಿಯನ್ನೇ ಅನುಸರಿಸುತ್ತಿದೆ. ಈಗ ಇದೇ ಸಿ ಟಿ ರವಿ ಹಿಂದೂಗಳಿಗೆ ಹಲಾಲ್ ಕಟ್ ಉತ್ಪನ್ನಗಳು ಬೇಡ, ಹಲಾಲ್ ಕಟ್ ಎನ್ನುವುದು ಆರ್ಥಿಕ ಜೆಹಾದ್, ಅದರ ವಿರುದ್ಧ ಹಿಂದೂಗಳು ಒಂದಾಗಬೇಕು ಎಂದು ಟ್ವೀಟಿಸಿದ್ದಾರೆ. ಹಾಗಾದರೆ ಈಗ ಹಿಂದೂಗಳು ಸ್ವತಃ ಸಿ ಟಿ ರವಿಯವರೇ ಮೆಚ್ಚುಗೆ ವ್ಯಕ್ತಪಡಿಸಿರುವ ಮತ್ತು ಕಡ್ಡಾಯವಾಗಿ ಹಲಾಲ್ ಕಟ್ ಪದ್ಧತಿ ಪಾಲಿಸುತ್ತಿರುವ ಟೆಂಡರ್ ಚಿಕನ್ನಿಂದ ಉತ್ಪನ್ನಗಳನ್ನು ಖರೀದಿಸುವುದನ್ನು ನಿಷೇಧಿಸಬೇಕೇ..?
ಹಿಂದೂಗಳ ಜಾತ್ರೆಯಲ್ಲಿ ಮುಸಲ್ಮಾನರ ಅಂಗಡಿಗಳಿಗೆ ನಿಷೇಧ ಹೇರಬೇಕೆಂಬ ವ್ಯಾಪಾರ ನಿಷೇಧದ ವಾದ ಹೇಗೆ ರಾಜಕೀಯ ಮುಖವಾಡವೋ ಅದೇ ರೀತಿ ಹಲಾಲ್ ಕಟ್ ಬಹಿಷ್ಕಾರ ವಾದವೂ ರಾಜಕೀಯ ಮುಖವಾಡವಷ್ಟೇ. ಈ ರಾಜಕಾರಣಿಗಳು, ಸಂಘಟನೆಗಳು ದೊಡ್ಡ ದೊಡ್ಡ ಕಂಪನಿಗಳು, ಉದ್ಯಮಿಗಳನ್ನು ಪ್ರಶ್ನೆ ಮಾಡಲಾರವು. ಅದಂತೂ ಸತ್ಯ, ಅದೂ ಅದಾನಿಯೇ ಆಗಿರಲಿ, ಪತಂಜಲಿಯ ಯೋಗಗುರು ಬಾಬಾ ರಾಮ್ದೇವೂ ಆಗಿರಲಿ.